ಶುಂಠಿಗೆ ಉತ್ತಮ ಬೆಲೆ: ರೈತರ ಜೇಬಿಗೆ ಹಣದ ಹರಿವು
ಕಣಿವೆ : ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಹಾಗೂ ಭೂಮಿಯಲ್ಲಿ ಸಮರ್ಪಕವಾದ ಬೆಳೆ ಇಲ್ಲದ ಕಾರಣ ನಷ್ಟದ ಮೇಲೆ ನಷ್ಟಕ್ಕೆ ಸಿಲುಕಿದ್ದ ಶುಂಠಿ ಬೆಳೆಗಾರರಿಗೆ ಈ ಬಾರಿಯ ದೀಪಾವಳಿ ಶುಕ್ರದೆಸೆ ನೀಡಿದೆ.
ಶುಂಠಿ ಫಸಲಿಗೆ ಮಾರುಕಟ್ಟೆ ಯಲ್ಲಿ ಉತ್ತಮವಾದ ದರ ದೊರಕುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರು ತಾವು ಬೆಳೆದಂತಹ ಹಾಗೂ ಬೆಳೆದ ಫಸಲು ರೋಗಗಳಿಗೆ ಸಿಲುಕಿ ಹಾಳಾಗದಂತೆ ಸಾಕಷ್ಟು ಹಣ ವ್ಯಯಿಸಿ ರಸಾಯನಿಕ ಸಿಂಪಡಣೆ ಮಾಡಿ ಬಹಳಷ್ಟು ತಾಳ್ಮೆಯಿಂದ ಉಳಿಸಿಕೊಂಡಿದ್ದ ಕೆಲವೇ ಕೆಲವು ರೈತರಿಗೆ ಮಾತ್ರ ಶುಂಠಿ ಸಂತಸ ಹಾಗೂ ಸಂಭ್ರಮವನ್ನು ತಂದಿದೆ. ಹಾಗಾಗಿ ಬಹಳಷ್ಟು ಮಂದಿ ಬೆಳೆಗಾರರು ಬೆಳೆದ ಹೊಲದಲ್ಲಿಯೇ ವ್ಯಾಪಾರಿಗಳು ಖರೀದಿಸಿ ವಾಷಿಂಗ್ ಗೆ ಒಳಪಡಿಸದೇ ನೇರವಾಗಿ ಚೀಲಕ್ಕೆ ತುಂಬಿ ಸಾಗಿಸುತ್ತಿರುವುದು ಕುಶಾಲನಗರ ತಾಲ್ಲೂಕಿನ ಬಹುತೇಕ ಕಡೆ ಕಂಡು ಬರುತ್ತಿರುವ ಸಾಮಾನ್ಯ ಚಿತ್ರಣವಾಗಿದೆ.
60 ಕೆಜಿ ತೂಕದ ಒಂದು ಚೀಲ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಇದೀಗ 2900 ಹಾಗೂ 3000 ರೂ ದೊರಕುತ್ತಿದೆ. ಒಂದು ಎಕರೆ ಭೂಮಿಯಲ್ಲಿ ಸರಾಸರಿ 250 ರಿಂದ 300 ಚೀಲದಷ್ಟು ಫಸಲು ಬಂದರೆ ಎಕರೆಯೊಂದರಲ್ಲಿ ಕನಿಷ್ಟ 9 ಲಕ್ಷ ಹಣ ಸಿಗುತ್ತಿದೆ. ಈ ಪೈಕಿ ಖರ್ಚು ಕಳೆದು ಬರೋಬ್ಬರಿ 5 ಲಕ್ಷ ಹಣ ಉಳಿತಾಯ ವಾಗುತ್ತಿದೆ. ಈಗ ಇರುವ ಶುಂಠಿಯ ದರ ದೀಪಾವಳಿ ಬಳಿಕ ನಿಲ್ಲುವುದು ಸೋಜಿಗ ಎನ್ನಲಾಗುತ್ತಿದೆ. ಹಾಗಾಗಿ ಬೆಳೆಗಾರರು ಗಾಳಿ ಬಂದಾಗ ತೂರಿಕೋ ಎಂಬ ಗಾಧೆಯ ಮಾತಿನಂತೆ ದೀಪಾವಳಿ ಒಳಗೆಯೇ ಶುಂಠಿ ಕಟಾವು ಮಾಡಿ ಇ ಬಾರಿಯ ದೀಪಾವಳಿ ಹಬ್ಬವನ್ನು ಬಹಳ ಸಡಗರ ಸಂಭ್ರಮಗಳಿಂದ ಆಚರಿಸಲು ಒಳಗೊಳಗೆ ಯೋಜನೆ ರೂಪಿಸುತ್ತಿದ್ದಾರೆ.