ಪಾಲಿಬೆಟ್ಟದಲ್ಲಿ ಅದ್ಧೂರಿ ಆಯುಧ ಪೂಜೋತ್ಸವ: ಆಟೋ ಚಾಲಕರ ಸೇವಾ ಮನೋಭಾವಕ್ಕೆ ಗಣ್ಯರ ಮೆಚ್ಚುಗೆ
ಪಾಲಿಬೆಟ್ಟ :- ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಂಕಷ್ಟದಲ್ಲಿರುವವರಿಗೆ ನೇರವಾಗುವುದರ ಮೂಲಕ ಪರಿಸರ, ಶುಚಿತ್ವ ಸೇರಿದಂತೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವದರ ಮೂಲಕ ಮಾದರಿಯಾದ ಪಾಲಿಬೆಟ್ಟ ಆಟೋ ಚಾಲಕರ ಸೇವಾ ಕಾರ್ಯದ ಬಗ್ಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ ಅದ್ದೂರಿ ಆಯುಧ ಪೂಜೋತ್ಸವವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಯಶಸ್ವಿ ಕಾಣಲು ಸಾಧ್ಯವಾಗಲಿದ್ದು ಪಾಲಿಬೆಟ್ಟದ ಆಟೋ ಚಾಲಕರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನಿರಂತರ ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗ್ರಾಮದಲ್ಲಿ ಹಬ್ಬ ಆಚರಣೆಗಳ ಮೂಲಕ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಂಡಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ ಹೊರ, ಜಿಲ್ಲೆ ರಾಜ್ಯಗಳಿಂದ ಆಗಮಿಸುವವರ ಬಗ್ಗೆ ನಿಗಾ ವಹಿಸಬೇಕಾಗಿದೆ ಕೂಲಿ ಕೆಲಸಕ್ಕೆ ಎಂದು ಬರುವವರು ವಿವಿಧ ಕೃತ್ಯಗಳಲ್ಲಿ ಭಾಗವಹಿಸುವುದರೊಂದಿಗೆ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಹಲವು ಅಪರಾಧ ಪ್ರಕರಣಗಳು ಕಂಡುಬಂದಿದ್ದು. ಅಂತವರ ಬಗ್ಗೆ ಆಟೋ ಚಾಲಕರು ಹೆಚ್ಚಿನ ನಿಗ ವಹಿಸಿದ್ದಲ್ಲಿ ಅಪರಾಧ ಪ್ರಕರಣಗಳಿಂದ ತಡೆಗಟ್ಟಲು ಸಾಧ್ಯವಾಗಲಿದೆ. ಪೊಲೀಸ್ ಇಲಾಖೆ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಮೇಲೆ ನಿಗಾ ವಹಿಸಬೇಕೆಂದು ಹೇಳಿದರು.
ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ದೂಜ ವೇಗಸ್ , ಗ್ರಾಮ ಪಂಚಾಯಿತಿ ಸದಸ್ಯ ಮಾಳಟ್ಟಿರ ಪವಿತ್ರ, ಪಾಲಿಬೆಟ್ಟ ವರ್ತಕರ ಸಂಘದ ಅಧ್ಯಕ್ಷ ಮುನೀರ್, ಉಪಾಧ್ಯಕ್ಷ ವಿಜೇಶ್, ಖಜಾಂಚಿ ಅಬೂಬಕ್ಕರ್, ಕಾವೇರಿ ತಮಿಳು ಸಂಘದ ಜಿಲ್ಲಾಧ್ಯಕ್ಷ ಮೈಕಲ್, ಕಾಫಿ ಬೆಳೆಗಾರ ವಾಟೀರಿರಾ ವಿನು, ವರ್ತಕರಾದ ಸುಧಾಕರ್ ರೈ, ಪೊಲೀಸ್ ಉಪ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ಆಟೋ ಚಾಲಕ ಸಂಘದ ಪ್ರಮುಖರು ಮತ್ತಿತರರು ಹಾಜರಿದ್ದರು. ಕೇರಳದ ಹೆಸರಾಂತ ರಾಗತರಂಗ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಿತು ಪಾಲಿಬೆಟ್ಟ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯವು ನಡೆಯಿತು. ಆಟೋಗಳಿಗೆ ಸಾಮೂಹಿಕ ಪೂಜೆ ನೆರವೇರಿಸಲಾಯಿತು.