ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆ ಜಿಲ್ಲೆಯ ಅಗತ್ಯ ಇರುವ ಕಡೆ ಸರ್ಕಾರಿ ಬಸ್ಸು ಕಲ್ಪಿಸಿ: ಧರ್ಮಜ ಉತ್ತಪ್ಪ

Mar 6, 2026 - 17:48
 0  155
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆ ಜಿಲ್ಲೆಯ ಅಗತ್ಯ ಇರುವ ಕಡೆ ಸರ್ಕಾರಿ ಬಸ್ಸು ಕಲ್ಪಿಸಿ: ಧರ್ಮಜ ಉತ್ತಪ್ಪ

ಮಡಿಕೇರಿ ಮಾ.06:-ಕೊಡಗು ಜಿಲ್ಲೆಯ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಿ ಬಸ್ ನಿಯೋಜಿಸುವಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಸೂಚಿಸಿದ್ದಾರೆ.  

ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಸಂಬಂಧ ಶುಕ್ರವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಈ ಕುರಿತು ವಿಷಯ ಪ್ರಸ್ತಾಪಿಸಿದ ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪಿ.ವಿ.ಜಾನ್ಸನ್ ಅವರು ಪಿರಿಯಾಪಟ್ಟಣ ಮಾಲ್ದಾರೆ, ಚೆನ್ನಂಗಿ, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಅಮ್ಮತ್ತಿ, ವಿರಾಜಪೇಟೆ ಮಾರ್ಗ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸರ್ಕಾರಿ ಬಸ್‍ನ್ನು ನಿಯೋಜಿಸುವಂತೆ ಅಲ್ಲಿನ ಸಾರ್ವಜನಿಕರು ಹಾಗೂ ಪ್ರಾಚಾರ್ಯರು ಮನವಿ ಮಾಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗಮನ ಸೆಳೆದರು.  

ಈ ಬಗ್ಗೆ ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯರಾದ ಕೆ.ಜಿ.ಪೀಟರ್ ಅವರು ಮಾತನಾಡಿ ಕೊಡಗು ಜಿಲ್ಲಾ ಕೇಂದ್ರದಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಇಲ್ಲದಿರುವುದು ಬೇಸರ ತರಿಸುವ ಸಂಗತಿ ಎಂದು ಹೇಳಿದರು.  

ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಇದೆ. ಆದರೆ ಮಡಿಕೇರಿಯಲ್ಲಿ ವಿಭಾಗೀಯ ಕೇಂದ್ರ ಇಲ್ಲದಿರುವುದು ನೋವಿನ ಸಂಗತಿ. ಆದ್ದರಿಂದ ಈ ಕಚೇರಿ ತೆರೆಯಬೇಕು. ಇದರಿಂದ ಸರ್ಕಾರಿ ಬಸ್‍ಗಳ ನಿಯೋಜನೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. 

ಈ ಕುರಿತು ಮಾತನಾಡಿದ ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಂತರಾಜು ಅವರು ಕೂಡಲೇ ಮಡಿಕೇರಿಯಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಆರಂಭಿಸಲು ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ನಿಯೋಗ ತೆರಳುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ಪ್ರಯತ್ನಿಸುವಂತೆ ಸಲಹೆ ಮಾಡಿದರು.   

ಈ ಸಂಬಂಧ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಈರಸಪ್ಪ ಅವರು ಸಾರ್ವಜನಿಕರ ಮನವಿ ಮೇರೆಗೆ ಹಲವು ಕಡೆಗಳಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಹಲವು ಗ್ರಾಮಗಳಿಗೆ ಬೇಡಿಕೆ ಇದೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪಿ.ವಿ.ಜಾನ್ಸನ್ ಅವರು ಈ ಹಿಂದೆ ಕೋಲಾರ ಜಿಲ್ಲೆಯ ಕೆಜಿಎಫ್‍ಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರವಿತ್ತು, ಕಳೆದ ಹಲವು ತಿಂಗಳಿನಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಆದ್ದರಿಂದ ಈ ಬಸ್ಸು ಮಾರ್ಗವನ್ನು ಮುಂದುವರಿಸಬೇಕು ಎಂದು ಕೋರಿದರು.   

ಈ ಕುರಿತು ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ಪಪ್ಪ ಅವರು ಈ ಹಿಂದೆ ಓಡಾಡುತ್ತಿದ್ದ ಬಸ್‍ಗಳನ್ನು ಮುಂದುವರೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 

ಆಹಾರ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಧರ್ಮಜ ಉತ್ತಪ್ಪ ಅವರು ಹಲವು ಕಡು ಬಡವರಿಗೆ ಎಪಿಎಲ್ ಕಾರ್ಡ್ ದೊರೆತಿದ್ದು, ಇದನ್ನು ಸರಿಪಡಿಸುವಂತೆ ಹಲವು ಸಭೆಗಳಲ್ಲಿ ಹೇಳಲಾಗಿದೆ. ಈ ಕೆಲಸ ಪ್ರಗತಿ ಸಾಧಿಸಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ನಿರೀಕ್ಷಕರಾದ ಶೀಲಕುಮಾರಿ ಅವರು ಸರ್ಕಾರದಿಂದ ಆದಾಯ ತೆರಿಗೆ ಫೈಲ್ ಮಾಡಿರುವ 1.20 ಲಕ್ಷ ಮೇಲ್ಪಟ್ಟ ಆದಾಯ ಹೊಂದಿರುವ ಮತ್ತು ಇತರೆ ಮಾನದಂಡಗಳಡಿ ಜಿಲ್ಲೆಯಲ್ಲಿ ಒಟ್ಟು 4,511 ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಗೊಂಡಿವೆ ಎಂದು ಮಾಹಿತಿ ನೀಡಿದರು. 

ಪರಿವರ್ತನೆಗೊಂಡಿರುವ ಪೈಕಿ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಗೊಂಡಿದ್ದಲ್ಲಿ ಅಂತಹ ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರು/ ಆಹಾರ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಸ್ಥಳ ಪರಿಶೀಲಿಸಿ ಬಿಪಿಎಲ್‍ಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶೀಲಕುಮಾರಿ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಂತರಾಜು ಅವರು ಬಿಪಿಎಲ್ ಕಾರ್ಡ್ ಕೊಡಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. 

ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಅವರು ಮಾತನಾಡಿ ಗೋಣಿಕೊಪ್ಪದಲ್ಲಿ ಸರ್ಕಾರಿ ಬಸ್ ಇಲ್ಲದೆ ಪ್ರತಿನಿತ್ಯ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಭಾನುವಾರ ಅಂತು ಬಸ್‍ಗಳು ಕಡಿಮೆ ಇರುತ್ತದೆ. ಆದ್ದರಿಂದ ಹೆಚ್ಚಿನ ಬಸ್‍ಗಳನ್ನು ಓಡಿಸಬೇಕು ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಈರಸಪ್ಪ ಅವರು ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗ ಮೈಸೂರುಗೆ ಅರ್ಧ ಗಂಟೆಗೊಮ್ಮೆ ಬಸ್ ಸಂಚರಿಸುತ್ತಿದೆ. ಆದರೂ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಹೇಳಿದರು. 

ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಅವರು ಶ್ರೀಮಂಗಲ ವ್ಯಾಪ್ತಿಯಲ್ಲಿ ಲೈನ್‍ಮೆನ್‍ಗಳ ಕೊರತೆ ಇದ್ದು, ಕೂಡಲೇ ಲೈನ್‍ಮೆನ್‍ಗಳನ್ನು ನಿಯೋಜಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

‘ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಜ ಉತ್ಪಪ್ಪ ಅವರು ಜಿಲ್ಲೆಯಲ್ಲಿ 291 ಲೈನ್‍ಮೆನ್ ಹುದ್ದೆಗಳಲ್ಲಿ 51 ಹಿರಿಯ ಲೈನ್‍ಮೆನ್‍ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ 19 ಜನ ಲೈನ್‍ಮೆನಗಳು ನಿಯೋಜನೆಗೊಂಡಿದ್ದು, ಸ್ವಲ್ಪ ಸುಧಾರಣೆಯಾಗಲಿದೆ ಎಂದು ತಿಳಿಸಿದರು.’

ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಮೇ ತಿಂಗಳಲ್ಲಿ ತಲುಪಿಲ್ಲ. ತಲುಪದಿರುವವರಿಗೆ ತಲುಪಿಸಬೇಕು ಎಂದು ಕಾಂತರಾಜು ಅವರು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. 

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ.,78 ರಷ್ಟು ಪ್ರಗತಿ ಸಾಧಿಸಲಾಗಿದೆ. ನವೆಂಬರ್ ಅಂತ್ಯದವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಾವತಿ ಮಾಡಲಾಗಿದ್ದು, ಶೇ.98.81 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. 

ಗೃಹಜ್ಯೋತಿ ಯೋಜನೆಯಡಿ ಶೇ.99.2 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಅವರು ಮಾಹಿತಿ ನೀಡಿದರು. 

ಯುವನಿಧಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್ ಅವರು ಫೆಬ್ರವರಿ ಮಾಸಾಂತ್ಯಕ್ಕೆ ಪದವೀಧರರು ಮತ್ತು ಡಿಪ್ಲೋಮ ಪದವೀದರರು ಸೇರಿ 1719 ಫಲಾನುಭವಿಗಳಿಗೆ 5.06 ಕೋಟಿ ಹಣವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಗ್ಯಾರಂಟಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದಾಗಿದೆ ಎಂದು ಹೇಳಿದರು. 

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಶರೀ ಗಿರೀಶ್, ಕೆ.ಸಿ.ಭೀಮಯ್ಯ, ಪಂಕಜ, ಸದಸ್ಯರಾದ ಮಂದ್ರೀರ ಮೋಹನ್ ದಾಸ್, ಪಿ.ಎಲ್.ಸುರೇಶ್, ಕೆ.ಎಂ.ಬಶೀರ್, ಕಾಳಿಮಾಡ ಪ್ರಶಾಂತ್, ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0