ನಡುರಸ್ತೆಯಲ್ಲಿ ಹೃದಯಾಘಾತ: ನೆರವು ಸಿಗದೆ ಯುವಕ ಮೃತ್ಯು! ಸಾವಿನಲ್ಲೂ ಮಾನವೀಯತೆ ಮೆರೆದ ಕುಟುಂಬ – ಕಣ್ಣು ದಾನ
ಬೆಂಗಳೂರು, ಡಿ.16: ನಡುರಸ್ತೆಯಲ್ಲೇ ಹೃದಯಾಘಾತಕ್ಕೆ ಒಳಗಾದ ಯುವಕನೊಬ್ಬ, ಆಸ್ಪತ್ರೆಗೆ ಕರೆದೊಯ್ಯುವಂತೆ ಆತನ ಪತ್ನಿ ಮನವಿ ಮಾಡಿದರೂ ಸಾರ್ವಜನಿಕರಿಂದ ನೆರವು ಸಿಗದೆ ಮೃತಪಟ್ಟಿದ್ದಾನೆ.
ಇಟ್ಟಮಡುವಿನ ಬಾಲಾಜಿನಗರ ನಿವಾಸಿ 34 ವರ್ಷದ ವೆಂಕಟರಮಣನ್ ಅವರಿಗೆ ಬುಧವಾರ ಮುಂಜಾನೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿ ರೂಪ ಅವರೊಂದಿಗೆ ಬೈಕ್‌ನಲ್ಲಿ ಜಯದೇವ ಹೃದಯ ಸಂಸ್ಥೆ ಕಡೆಗೆ ಹೊರಟಿದ್ದರು. ಮನೆಯಿಂದ ಸುಮಾರು 100 ಮೀಟರ್ ದೂರ ಸಾಗುತ್ತಿದ್ದಾಗಲೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ರಸ್ತೆ ಮಧ್ಯೆ ಕುಸಿದು ಬಿದ್ದರು.
ಘಟನೆಯ ವೇಳೆ ವೆಂಕಟರಮಣನ್ ನೋವಿನಿಂದ ಒದ್ದಾಡುತ್ತಿದ್ದರೂ, ಸುತ್ತಮುತ್ತಲಿದ್ದ ಸಾರ್ವಜನಿಕರು ನೆರವಿಗೆ ಮುಂದಾಗಲಿಲ್ಲ. ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಸಹಾಯಕ್ಕಾಗಿ ಅಂಗಲಾಚಿದರೂ ಪ್ರಯೋಜನವಾಗಲಿಲ್ಲ. ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ದಂಪತಿ ಮತ್ತೆ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳಲು ಪ್ರಯತ್ನಿಸಿದ್ದು, ಮಾರ್ಗಮಧ್ಯೆ ಕದೇರನಹಳ್ಳಿ ಸಮೀಪ ವೆಂಕಟರಮಣನ್ ಕೊನೆಯುಸಿರೆಳೆದಿದ್ದಾರೆ.
ಪತ್ನಿ ರೂಪ ಹೇಳುವಂತೆ, ಸ್ಥಳೀಯ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಲಾಗಿದ್ದು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡಲಾಗಲಿಲ್ಲ. ಮಾರ್ಗಮಧ್ಯೆ ತಾನು ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಯಾರೂ ನೆರವಾಗಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ದುರ್ಘಟನೆಯ ನಡುವೆಯೂ ವೆಂಕಟರಮಣನ್ ಕುಟುಂಬ ಮಾನವೀಯತೆಯ ಉದಾಹರಣೆ ನೀಡಿದೆ. ಮೃತರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರಿಗೆ ದೃಷ್ಟಿ ನೀಡುವ ನಿರ್ಧಾರವನ್ನು ಕುಟುಂಬ ಕೈಗೊಂಡಿದೆ.