70 ಲಕ್ಷ ಮೌಲ್ಯದ ಚಿನ್ನಭರಣಕ್ಕೆ ಸೊಸೆಯ ಮಾಸ್ಟರ್ ಪ್ಲಾನ್ ಠುಸ್: ಸ್ನೇಹಿತನ ಜೊತೆಗೂಡಿ ಸೊಸೆ ಮನೆಯೊಳಗೆ ಮಾಡಿದ್ದೇನು ಗೊತ್ತಾ!
ಹಾಸನ: ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದ ಕೇಶವೇಗೌಡ ಎಂಬುವರ ಮನೆಗೆ ನುಗ್ಗಿ 69.56 ಲಕ್ಷ ರೂ. ಮೌಲ್ಯದ 441.5 ಗ್ರಾಂ ಚಿನ್ನಾಭರಣ ಹಾಗೂ 13.40 ಲಕ್ಷ ನಗದು ಕಳವು ಮಾಡಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣವನ್ನು ಕಳ್ಳತನ ನಡೆದ ಒಂದೇ ದಿನದಲ್ಲಿ ಭೇದಿಸಿದ ಹಾಸನ ಗ್ರಾಮಾಂತರ ಪೊಲೀಸರು, ಮನೆಯ ಸೊಸೆ ಹಾಗೂ ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶನಿವಾರ ಬೆಳಗ್ಗೆ ಕೇಶವೇಗೌಡ ಅವರ ಪತ್ನಿ ಜಯಲಕ್ಷ್ಮೀ ಹಾಗೂ ಪುತ್ರ ವೇಣುಗೋಪಾಲ್ ಜಮೀನಿನ ಕೆಲಸಕ್ಕೆ ತೆರಳಿದ್ದರು. ಮಗನನ್ನು ಶಾಲಾ ಬಸ್‌ಗೆ ಹತ್ತಿಸಿದ ಬಳಿಕ ಮನೆಯಲ್ಲಿದ್ದ ಸೊಸೆ ಅಮೃತಾ, ತನ್ನ ಸ್ನೇಹಿತ ಪರಮೇಶ್ @ ಚೇತನ್ ಎಂಬಾತನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಬೀರುವಿನಲ್ಲಿದ್ದ 441.5 ಗ್ರಾಂ ಚಿನ್ನಾಭರಣ ಹಾಗೂ 13.40 ಲಕ್ಷ ನಗದನ್ನು ತೆಗೆದು ಸ್ನೇಹಿತನಿಗೆ ನೀಡಿದ್ದಾಳೆ. ಬಳಿಕ, ಮನೆಯ ಮುಂಬಾಗಿಲಿಗೆ ಬೀಗ ಹಾಕದೇ ಕೊಟ್ಟಿಗೆಗೆ ಮಾತ್ರ ಬೀಗ ಹಾಕಿ ಅಮೃತಾ ಜಮೀನಿನತ್ತ ತೆರಳಿದ್ದಾಳೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಮನೆಗೆ ಮರಳಿದ ಕೇಶವೇಗೌಡ ಅವರಿಗೆ ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿರುವುದು ಗೊತ್ತಾಗಿದೆ. ಈ ವೇಳೆ ಅಮೃತಾ ಕೂಡ ಕಳ್ಳತನ ನಡೆದಿದೆ ಎಂದು ಹೇಳಿದ್ದರು.
ತನಿಖೆಯಲ್ಲಿ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದ್ದು, ಅಮೃತಾ (32) ಹಾಗೂ ಹಿರಿಹಳ್ಳಿ ಗ್ರಾಮದ ಪರಮೇಶ್ @ ಚೇತನ್ (38) ಹಲವು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
