ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ನ ಇಬ್ಬರಿಗೆ ಹೈಕೋರ್ಟ್‌ನಿಂದ 15 ದಿನಗಳ ಪೆರೋಲ್ : ಸಂಬಂಧಿಯ ಮರಣೋತ್ತರ ಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ

Oct 14, 2025 - 21:43
 0  435
ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ನ ಇಬ್ಬರಿಗೆ ಹೈಕೋರ್ಟ್‌ನಿಂದ 15 ದಿನಗಳ ಪೆರೋಲ್ : ಸಂಬಂಧಿಯ ಮರಣೋತ್ತರ ಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ
ಹೈಕೋರ್ಟ್

ಬೆಂಗಳೂರು: ಒಂದೊಮ್ಮೆ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸದಸ್ಯರಾದ ದಂಡುಪಾಳ್ಯ ಕೃಷ್ಣ ಮತ್ತು ದಂಡುಪಾಳ್ಯ ದೊಡ್ಡಹನುಮ ಗೆ ಹೈಕೋರ್ಟ್ 15 ದಿನಗಳ ಪೆರೋಲ್ ಮಂಜೂರು ಮಾಡಿದೆ.

ಸಂಬಂಧಿಯ ಮರಣೋತ್ತರ ಕ್ರಿಯೆಯಲ್ಲಿ ಭಾಗವಹಿಸಲು ಇಬ್ಬರೂ ಕೈದಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಕುರಿತು ವಿಚಾರಣೆ ನಡೆಸಿ, ನಿಗದಿತ ಷರತ್ತುಗಳೊಂದಿಗೆ ಪೆರೋಲ್ ನೀಡುವಂತೆ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪೆರೋಲ್ ಅವಧಿಯಲ್ಲಿ ಕೈದಿಗಳಿಗೆ ಪೊಲೀಸರ ಎಸ್ಕಾರ್ಟ್ ಒದಗಿಸಲು ನ್ಯಾಯಾಲಯ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಅರ್ಜಿದಾರರ ಪರ ವಕೀಲರು, ಎಸ್ಕಾರ್ಟ್ ವೆಚ್ಚವನ್ನು ಕೈದಿಗಳು ಭರಿಸಲು ಸಾಧ್ಯವಿಲ್ಲವೆಂದು ತಿಳಿಸಿ, ಈ ಹಿಂದಿನ ಸಂದರ್ಭದಲ್ಲೂ ಎಸ್ಕಾರ್ಟ್ ನೀಡದೆ ಪೆರೋಲ್ ನೀಡಲಾಗಿತ್ತು ಎಂದು ವಾದಿಸಿದರು.

 ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಎಸ್ಕಾರ್ಟ್ ನೀಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿ, ಪೆರೋಲ್ ಮಂಜೂರು ಮಾಡಿದೆ.

ಇದಲ್ಲದೆ, ಇಬ್ಬರು ಕೈದಿಗಳು ಈಗಾಗಲೇ ಸುಮಾರು 25 ವರ್ಷಗಳಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಾ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಪರಿಗಣಿಸಬೇಕೆಂದು ಸಹ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.

 ದಂಡುಪಾಳ್ಯ ಗ್ಯಾಂಗ್ ಸದಸ್ಯರು ರಾಜ್ಯಾದ್ಯಂತ ನಡೆದ ಸರಣಿ ಕಳ್ಳತನ, ದರೋಡೆ ಮತ್ತು ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1