ಗೋಣಿಕೊಪ್ಪಲಿನಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ ಶೋಭಾಯಾತ್ರೆ

ಗೋಣಿಕೊಪ್ಪಲಿನಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ ಶೋಭಾಯಾತ್ರೆ

ಗೋಣಿಕೊಪ್ಪ :ಎರಡು ಸಹಸ್ರಕ್ಕೂ ಹೆಚ್ಚು ಕೈಗಳಲ್ಲಿ ಕೇಸರಿ ಧ್ವಜಗಳ ಹಾರಟ, ರಾಮ ಸಹಸ್ರನಾಮದ ಕಂಠಗಳನ್ನು ಮುಗಿಲೆತ್ತರದ ದ್ವನಿಯಾಗಿಸಿದ ಸಾಹಸ ಗೋಣಿಕೊಪ್ಪ ನಗರದಲ್ಲಿ ಆಯೋಜನಗೊಂಡ ಹಿಂದೂ ಸಂಗಮದ ಮೆರುಗಾಗಿತ್ತು.

ಭಾನುವಾರ 'ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ' ಆವರಣದಿಂದ 'ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದ'ವರೆಗೆ 'ಗೋಣಿಕೊಪ್ಪ 'ಮಂಡಳ ಹಿಂದೂ ಸಂಗಮ' ಆಯೋಜನ ಸಮಿತಿ ವತಿಯಿಂದ ನಡೆದ ಶೋಭಾ ಯಾತ್ರೆ ಹಿಂದುತ್ವ ಬಲವರ್ತನೆಗೆ ಸಾಕ್ಷಿ ನುಡಿಯಿತು.

 ಮೆರವಣಿಗೆಯ ಉದ್ದಕ್ಕೂ, ಕಾಡು ಮಕ್ಕಳ ಹಾಡು ಕುಣಿತ, ಕೇರಳದ ಮಹಿಳಾ ಚಂಡೆವಾದ್ಯ, ಭಜನಾ ನೃತ್ಯ, ಮಕ್ಕಳ ಚದ್ಮ ವೇಷಗಳು, ಕಾರ್ಯಕ್ರಮದ ಗಾಂಭೀರ್ಯತೆ ಮತ್ತು ಲವಲವಿಕೆಯಾಗಿತ್ತು. ಮೆರವಣಿಗೆಯ ಉದ್ದಕ್ಕೂ ಪಾನಕ, ಮಜ್ಜಿಗೆ ,ನೀರು ವಿತರಣೆ ನಡೆಯಿತು. ಪ್ರಸನ್ನ ಗಣಪತಿ ಸೇವಾ ಸಂಘ, ಭಗತ್ ಸಿಂಗ್ ಯುವಕ ಸಂಘ ,ಶಿವಾಜಿ ಯುವ ಸೇನೆ, ಚಿನ್ನ ಬೆಳ್ಳಿ ವರ್ತಕರ ಸಂಘ, ಸೇರಿದಂತೆ ಹಲವು ಸಂಘಟನೆಗಳು ಮೆರವಣಿಗೆಯ ಭಾಗವಾಗಿದ್ದವು.

ಸ್ಥಳೀಯ ಸೈಕ್ಲೋನ್ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ರಾಮನ ಹಾಗೂ ಶಿವನ ನೃತ್ಯ ಪ್ರದರ್ಶನ ಮತ್ತು ಕಾವೇರಿ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಕತ್ತಿಯಾಟ್ ಮತ್ತು ಉಮ್ಮತ್ತಾಟ್ ಗಮನ ಸೆಳೆಯಿತು.

ನಂತರ ಶಾಲೆ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘ ಪ್ರಚಾರಕ್ ಮನೋಹರ್ ಮಟದ್ ಮಾತನಾಡಿ, "ಹಿಂದೂ ಸಂಗಮ ಇತರ ಧರ್ಮಗಳ ವಿರುದ್ಧ ನಿಂತ ಹೋರಾಟವಲ್ಲ, ಹಿಂದುಗಳ ಸಂಘಟನೆಯ ಬಲವನ್ನ ಹೆಚ್ಚಿಸುವ ಕಾರ್ಯಕ್ರಮವಾಗಿದೆ" ತಿಳಿಸಿದರು.

 "ಹಿಂದೂ ರಾಷ್ಟ್ರ ಭಾರತಕ್ಕೆ ತನ್ನದೇ ಆದ ಪರಂಪರೆ ಮತ್ತು ಅಪಾರ ಸಂಸ್ಕೃತಿ ವಿಚಾರಗಳನ್ನ ಒಳಗೊಂಡಿದೆ. ಈ ಹಿನ್ನೆಲೆಯಿಂದಲೇ ಪ್ರಪಂಚಕ್ಕೆ ಭಾರತ ಧಾರ್ಮಿಕತೆಯ ಮಾದರಿ ರಾಷ್ಟ್ರವಾಗಿ ಹೊರಹೊಮ್ಮಿದೆ" ಎಂದರು "ಕೇವಲ ಆಚಾರಗಳನ್ನು ಮುಂದುವರಿಸುವುದು ಹಿಂದೂ ಧರ್ಮದ ಪ್ರಾಮುಖ್ಯತೆಯಲ್ಲ., ಸಂಸ್ಕೃತಿ ,ಸಂಭ್ರಮ ಸಹೋದರತ್ವ, ಜೀವನದ ಬಾಂಧವ್ಯಗಳನ್ನು ಒಟ್ಟುಗೂಡಿಸುವ ಮತ್ತು ಬದುಕಿನ ಮೌಲ್ಯಗಳನ್ನು ಕೇಂದ್ರೀಕರಿಸುವ ಸಂಗಮವಾಗಿಸುವ ಉದ್ದೇಶವೇ ಧರ್ಮದ ಮೂಲವಾಗಿದೆ"ಎಂದು ತಿಳಿಸಿದರು.

"ಸ್ವದೇಶಿ ವಸ್ತುಗಳನ್ನ ಬಳಸುವ ಮೂಲಕ ಈ ಮಣ್ಣಿನ ಧಾರ್ಮಿಕತೆಯ ಪವಿತ್ರತೆಯನ್ನು ಎತ್ತಿ ಹಿಡಿಯಬೇಕು" ಎಂದು ಕರೆ ನೀಡಿದರು. ಶಿಕ್ಷಕಿ ಬೆಂಜಾಂಡ ರಶ್ಮಿ ದೇವಯ್ಯ ಮಾತನಾಡಿ, "ಮಹಿಳೆಯರು ಈ ದೇಶದ ಶಕ್ತಿಯಾಗಿದ್ದಾರೆ. ಹಿಂದೂ ರಾಷ್ಟ್ರದ ಐಕ್ಯತೆಯ ಮನೋಭಾವನೆಯನ್ನು ಮಕ್ಕಳಲ್ಲಿ ಬಿತ್ತುವ ಕಾರ್ಯ ಮಹಿಳೆಯರಿಂದ ಮುಂದುವರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಪ್ರಜ್ಞಾಪೂರ್ವಕವಾಗಿ ವರ್ತಿಸಿದಾಗ ಹಿಂದುತ್ವ ರಾಷ್ಟ್ರವನ್ನು ಮತ್ತಷ್ಟು ಬಲಗೊಳಿಸಬಹುದಾಗಿದೆ" ಎಂದು ಸಲಹೆ ನೀಡಿದರು.

ಉದ್ಯಮಿ ಪ್ರಮೋದ್ ಕಾಮತ್ ಎಂ.ಪಿ ಕಾರ್ಯಕ್ರಮ ಅಧ್ಯಕ್ಷತೆಯಲ್ಲಿ ಮಾತನಾಡಿ, "ಮಕ್ಕಳಲ್ಲಿ ದೇಶಭಕ್ತಿಯನ್ನು ಬಿತ್ತುವ ಕಾರ್ಯ ಮಾತೆಯರಿಂದ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈ ಭಾರತದ ಸ್ವಾತಂತ್ರ್ಯದ ಮತ್ತು ಸನಾತನ ಧರ್ಮದ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಡೆಸಬೇಕಾಗಿದೆ. ಮಕ್ಕಳ ವ್ಯಕ್ತಿತ್ವದಲ್ಲಿ ಹಿಂದುತ್ವವನ್ನ ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ" ಎಂದು ಸಾರಿದರು.

 ಅರ್ಚಕ ಮಹೇಶ್ ಭಟ್ ಮಾತನಾಡಿದರು, ಹಿಂದೂ ಸಂಗಮ ಆಯೋಜನ ಸಮಿತಿಯ ಪ್ರಮುಖರುಗಳಾದ, ಗುಮ್ಮಟಿರ ಕಿಲನ್ ಗಣಪತಿ, ಸುಬ್ರಮಣಿ, ಸುರೇಶ್ ರೈ, ಸೋಮಯ್ಯ, ಅಕೀಲ್, ಪ್ರಸಾದ್ ಬಟ್ಟ್, ಚಲನ್ ನೆಲ್ಲಿರ, ಜ್ಯೋತಿ, ಸೇರಿದಂತೆ ಹಲವಾರು ಭಾಗಿಯಾಗಿದ್ದರು.