ಮನೆಗೆ ನುಗ್ಗಿ ಹಲ್ಲೆ; ಅಂಗಲಾಚಿದರೂ ನೆರವಿಗೆ ಯಾರೂ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿಯ ಕಣ್ಣೀರ ಮಾತು

Dec 23, 2025 - 10:24
 0  1.3k
ಮನೆಗೆ ನುಗ್ಗಿ ಹಲ್ಲೆ; ಅಂಗಲಾಚಿದರೂ ನೆರವಿಗೆ ಯಾರೂ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿಯ ಕಣ್ಣೀರ ಮಾತು

ಹುಬ್ಬಳ್ಳಿ, ಡಿ.22: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಭೀಕರ ಮರ್ಯಾದಗೇಡು ಹತ್ಯೆ ಪ್ರಕರಣ ರಾಜ್ಯದಾದ್ಯಂತ ತೀವ್ರ ಆಘಾತ ಉಂಟುಮಾಡಿದೆ. ಅಂತರಜಾತಿ ವಿವಾಹವಾಗಿದ್ದ ಏಳು ತಿಂಗಳ ಗರ್ಭಿಣಿ ಮಾನ್ಯಾಳನ್ನು ಆಕೆಯ ತಂದೆಯೇ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ಕುರಿತು ಪತಿ ವಿವೇಕಾನಂದ ಮನಕಲಕುವ ಹೇಳಿಕೆ ನೀಡಿದ್ದಾರೆ.

“ಮನೆಯೊಳಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದರು. ಕೈಜೋಡಿಸಿ ಬೇಡಿಕೊಂಡರೂ ಯಾರೊಬ್ಬರೂ ನೆರವಿಗೆ ಬರಲಿಲ್ಲ,” ಎಂದು ಪತಿ ವಿವೇಕಾನಂದ ಕಣ್ಣೀರಿಟ್ಟರು. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾವು ಕಳೆದ ಮೇ ತಿಂಗಳಲ್ಲಿ ಮದುವೆಯಾಗಿದ್ದೆವು. ಕುಟುಂಬದ ಕಿರುಕುಳದಿಂದ ಮಾನ್ಯಾ ನನ್ನ ಬಳಿ ಆಶ್ರಯ ಪಡೆದಿದ್ದಳು. ಹಾವೇರಿಯಲ್ಲಿನ ಸಂಬಂಧಿಕರ ಮನೆಯಲ್ಲಿ ನಾವು ವಾಸವಾಗಿದ್ದೆವು ಎಂದು ಅವರು ಹೇಳಿದರು.

ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಅವಳನ್ನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗುತ್ತಿತ್ತು. ಈ ನಡುವೆ, ಮಾನ್ಯಾಳ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪೊಲೀಸರ ಮುಂದೆ ನಾವು ಇಷ್ಟಪಟ್ಟು ಮದುವೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದೆವು. ಪೋಷಕರು ನಮ್ಮನ್ನು ಹುಡುಕುತ್ತಿದ್ದಾರೆ ಎಂಬ ಆತಂಕವನ್ನು ಮಾನ್ಯಾ ಪೊಲೀಸರಿಗೆ ತಿಳಿಸಿದ್ದಳು. ವಿಚಾರಣೆ ವೇಳೆ ಪೋಷಕರು “ನಾವು ನಮ್ಮ ಮಗಳನ್ನು ಸತ್ತಳಂತೆ ಕೈಬಿಟ್ಟಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆಯೆಂದು ವಿವೇಕಾನಂದ ಆರೋಪಿಸಿದರು.

ಘಟನೆಗೂ ಮುನ್ನ ಹಲ್ಲೆ ಆರೋಪ

ಘಟನೆಗೆ ಒಂದು ದಿನ ಮುನ್ನ ಶನಿವಾರ ಸಂಜೆ ಹುಬ್ಬಳ್ಳಿಯ ಗಿರಿಯಾಳ ರಸ್ತೆಯ ಬಳಿ ವಿವೇಕಾನಂದ ಅವರ ತಂದೆ ಹಾಗೂ ಮಾವನವರ ಮೇಲೆ ಟ್ರ್ಯಾಕ್ಟರ್‌ನಿಂದ ದಾಳಿ ನಡೆದಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಿವೇಕಾನಂದ ಮೇಲೂ ಗುಂಪೊಂದು ಕಲ್ಲುಗಳಿಂದ ಹಲ್ಲೆ ನಡೆಸಿದ ಆರೋಪವಿದೆ. ಅವರು ತಪ್ಪಿಸಿಕೊಂಡು ಬಂದರೂ, ನಂತರ ಅದೇ ಗುಂಪು ಮನೆಗೆ ನುಗ್ಗಿ ಅವರ ತಾಯಿ, ತಂದೆ ಹಾಗೂ ದೊಡ್ಡಪ್ಪನವರ ಮೇಲೂ ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ತಂದೆ ಹಾಗೂ ಮಾವನವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಾಯಿಯ ಮೇಲೂ ಸಾರ್ವಜನಿಕವಾಗಿ ಹಲ್ಲೆ ನಡೆದಿರುವ ಆರೋಪ ಇದೆ.

“ಮಾನ್ಯಾ ನಮ್ಮೊಂದಿಗೆ ಸಂತೋಷವಾಗಿಯೇ ಇದ್ದಳು. ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದೆವು. ನನ್ನ ತಂದೆ-ತಾಯಿಯರೂ ಅವಳನ್ನು ಮಗಳಂತೆ ಕಾಣುತ್ತಿದ್ದರು,” ಎಂದು ವಿವೇಕಾನಂದ ಹೇಳಿದರು. ಪತ್ನಿಯ ಹತ್ಯೆ ಮಾಡಿದವರಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೊಲೆಯಾದ ಮಾನ್ಯಾಳ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 3
Wow Wow 0