ಹುಣಸೂರಿನ ಚಿನ್ನದಂಗಡಿ ದರೋಡೆ: ಆರು ದಿನಗಳಾದರೂ ಪತ್ತೆಯಾಗದ ಆರೋಪಿಗಳು

Jan 3, 2026 - 23:37
 0  836
ಹುಣಸೂರಿನ ಚಿನ್ನದಂಗಡಿ ದರೋಡೆ: ಆರು ದಿನಗಳಾದರೂ ಪತ್ತೆಯಾಗದ ಆರೋಪಿಗಳು

ಮೈಸೂರು, ಜ. 3: ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಜ್ಯುವೆಲರಿ ಅಂಗಡಿಯಲ್ಲಿ ನಡೆದ ಭಾರೀ ದರೋಡೆ ಪ್ರಕರಣಕ್ಕೆ ಆರು ದಿನಗಳು ಕಳೆದರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಇನ್ನೂ ಯಶಸ್ಸು ದೊರೆತಿಲ್ಲ. ಸುಮಾರು ₹10 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ವಜ್ರಗಳನ್ನು ದೋಚಿ ಪರಾರಿಯಾದ ದರೋಡೆಕೋರರು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿರುವುದು ತನಿಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಡಿಸೆಂಬರ್ 27ರಂದು ಮಧ್ಯಾಹ್ನ ನಡೆದ ದರೋಡೆಯಲ್ಲಿ, ಗ್ರಾಹಕರಂತೆ ಅಂಗಡಿಗೆ ಪ್ರವೇಶಿಸಿದ ಐವರು ಏಕಾಏಕಿ ಗನ್ ತೋರಿಸಿ ಸಿಬ್ಬಂದಿ ಮತ್ತು ಗ್ರಾಹಕರನ್ನು ಬೆದರಿಸಿದರು. ದರೋಡೆ ನಡೆಯುವ ವೇಳೆಯಲ್ಲಿಯೇ ಅಂಗಡಿಯಲ್ಲಿ ವ್ಯಾಪಾರ ನಡೆಯುತ್ತಿದ್ದು, ಕೆಲ ಗ್ರಾಹಕರು ದರೋಡೆ ಆರಂಭವಾದ ಬಳಿಕವೂ ಅಂಗಡಿಗೆ ಬಂದಿದ್ದರು. ಎಲ್ಲರನ್ನೂ ಒಂದೇ ಸ್ಥಳದಲ್ಲಿ ಸೇರಿಸಿದ ಖದೀಮರು, ಕೇವಲ ಐದು ನಿಮಿಷಗಳೊಳಗೆ ಕೈಗೆ ಸಿಕ್ಕಷ್ಟು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಈ ದರೋಡೆಯಲ್ಲಿ ಸುಮಾರು 7 ಕೆ.ಜಿ. ಚಿನ್ನ ಮತ್ತು ವಜ್ರಾಭರಣ ಕಳವಾಗಿದ್ದು, ಒಟ್ಟು ಮೌಲ್ಯ ₹10 ಕೋಟಿಗೂ ಅಧಿಕವಾಗಿದೆ. ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆಗೆ ದೇಶದ ವಿವಿಧೆಡೆ ಒಟ್ಟು ಹತ್ತು ಶಾಖೆಗಳಿದ್ದು, ಕೇಂದ್ರ ಕಚೇರಿ ಕೇರಳದಲ್ಲಿದೆ. ಅಲ್ಲಿಂದಲೇ ಎಲ್ಲಾ ಶಾಖೆಗಳ ಸಿಸಿ ಟಿವಿ ಕ್ಯಾಮೆರಾಗಳನ್ನು ನಿಗಾವಹಿಸಲಾಗುತ್ತದೆ. ದರೋಡೆ ಕುರಿತು ಮ್ಯಾನೇಜರ್‌ಗೆ ಮಾಹಿತಿ ತಲುಪುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು.

ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳ ಮುಖಚಹರೆಗಳು ಸೆರೆಯಾಗಿದ್ದರೂ, ಅವರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ದರೋಡೆ ನಡೆಸಿದಷ್ಟೇ ವ್ಯವಸ್ಥಿತವಾಗಿ ಪರಾರಿಯ ಯೋಜನೆಯನ್ನೂ ಆರೋಪಿಗಳು ರೂಪಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.

ದರೋಡೆ ಬಳಿಕ ಆರೋಪಿಗಳು ಎರಡು ಪಲ್ಸರ್ ಬೈಕ್‌ಗಳಲ್ಲಿ ಪರಾರಿಯಾಗಿದ್ದು, ಒಂದು ಬೈಕ್‌ನಲ್ಲಿ ಮೂವರು ಹಾಗೂ ಮತ್ತೊಂದರಲ್ಲಿ ಇಬ್ಬರು ತೆರಳಿದ್ದಾರೆ. ಅವರ ಪರಾರಿಯ ದೃಶ್ಯಗಳು ಹುಣಸೂರು–ಕೆ.ಆರ್.ನಗರ ರಸ್ತೆಯ ಲಕ್ಷ್ಮಣತೀರ್ಥ ಫಾರ್ಮ್ ಹೌಸ್ ಸಮೀಪದ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಪ್ರಕರಣದ ಮತ್ತೊಂದು ಪ್ರಮುಖ ಅಂಶವೆಂದರೆ, ದರೋಡೆ ಸಮಯದಲ್ಲಿ ಆರೋಪಿಗಳು ಯಾವುದೇ ಮೊಬೈಲ್ ಫೋನ್ ಬಳಸಿರಲಿಲ್ಲ. ಇದರಿಂದ ತಾಂತ್ರಿಕ ತನಿಖೆಗೆ ಅಗತ್ಯವಾದ ಸುಳಿವುಗಳು ಲಭ್ಯವಾಗದೇ, ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ನಡುವೆ ತನಿಖೆಯ ನೇತೃತ್ವ ವಹಿಸಿದ್ದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸರ್ಕಾರ ವರ್ಗಾಯಿಸಿರುವುದು ತನಿಖೆಗೆ ಹಿನ್ನಡೆ ಉಂಟಾಗಬಹುದೆಂಬ ಚರ್ಚೆಗೆ ಕಾರಣವಾಗಿದೆ. ಎಸ್‌ಪಿಯಾಗಿದ್ದ ವಿಷ್ಣುವರ್ಧನ್ ಅವರನ್ನು ಕೆಪಿಎಗೆ ವರ್ಗಾಯಿಸಿ, ಮಂಡ್ಯ ಜಿಲ್ಲಾ ಎಸ್‌ಪಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮೈಸೂರು ಜಿಲ್ಲಾ ಎಸ್‌ಪಿಯಾಗಿ ನೇಮಿಸಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0