ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ | ಎಂಟು ತಿಂಗಳ ಹಿಂದಷ್ಟೇ ವಿವಾಹ; ಅಕ್ರಮ ಸಂಬಂಧದ ಶಂಕೆ
ಬೆಂಗಳೂರು, ನ.10: ಪತ್ನಿಯ ಕಿರುಕುಳದಿಂದ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗಿರಿನಗರದಲ್ಲಿ ಬೆಳಕಿಗೆ ಬಂದಿದೆ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಬ್ಯಾಂಕ್ ಉದ್ಯೋಗಿ ಗಗನ್ ರಾವ್ (29) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ರಾತ್ರಿ ಪತಿ–ಪತ್ನಿ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಗಗನ್ “ನೀನು ಚೆನ್ನಾಗಿರು” ಎಂದು ಹೇಳಿ ತನ್ನ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು ಎನ್ನಲಾಗಿದೆ. ಹೆಚ್ಚು ಹೊತ್ತಾದರೂ ಬಾಗಿಲು ತೆಗೆಯದ ಕಾರಣ ಕುಟುಂಬದವರು ಬಾಗಿಲು ಮುರಿದು ಒಳ ಹೋಗಿದಾಗ ಗಗನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು, ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮೃತರ ತಂಗಿ ರಮ್ಯಾ ನೀಡಿರುವ ದೂರಿನ ಪ್ರಕಾರ, ಪತ್ನಿ ಮೇಘನಾ ಜಾದವ್ ನಿರಂತರ ಕಿರುಕುಳ ನೀಡುತ್ತಿದ್ದರು. “ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯ ವರ್ತನೆ ಬದಲಾಗಿತ್ತು. ಅಣ್ಣನ ಮೊಬೈಲ್ ನೋಡುತ್ತಾ, ಯಾರ ಜೊತೆ ಮಾತನಾಡಿದರೂ ಸಂಶಯ ವ್ಯಕ್ತಪಡಿಸುತ್ತಿದ್ದಳು. ಜಗಳಗಳೇ ನಿತ್ಯದ ಸಂಗತಿಯಾಯಿತು,” ಎಂದು ಆರೋಪಿಸಿದ್ದಾರೆ.
ಪತ್ನಿ ಮೇಘನಾ ಜಾದವ್ ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣ ತಳ್ಳಿ ಹಾಕಿದ್ದಾರೆ. “ಗಗನ್ ಗೆ ಇಬ್ಬರು ಯುವತಿಯರೊಂದಿಗೆ ಅಕ್ರಮ ಸಂಬಂಧ ಇತ್ತು. ಅವರ ಕುಟುಂಬದವರು ಬಲವಂತವಾಗಿ ನನ್ನ ಜೊತೆ ಮದುವೆ ಮಾಡಿಸಿದರು. ನಾನು ಬೇರೆಯವರ ಸಹವಾಸ ಬಿಟ್ಟುಬಿಡಿ ಎಂದು ಹೇಳಿದ್ದೆ,” ಎಂದು ಮೇಘನಾ ಹೇಳಿದ್ದಾರೆ.
ಗಗನ್ ಕುಟುಂಬದವರು ಮೇಘನಾ ಗಂಡನ ಮೇಲೆ ವಾಮಾಚಾರ ನಡೆಸುತ್ತಿದ್ದಳು ಎಂದು ಆರೋಪಿಸಿದ್ದಾರೆ. “ನಿಂಬೆಹಣ್ಣು ಇಟ್ಟು ವಾಮಾಚಾರ ಮಾಡಿಸಿದ್ದಳು,” ಎಂದು ಗಗನ್‌ನ ಅಕ್ಕ ರಮ್ಯಾ ಹೇಳಿದ್ದಾರೆ.
ಈ ಕುರಿತು ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.