ವಿರಾಜಪೇಟೆ ಆಟೋ ಚಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ: ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕುವುದೇ ನಿಜವಾದ ಸ್ವಾತಂತ್ರ್ಯ: ಶಾಸಕ ಎ.ಎಸ್ ಪೊನ್ನಣ್ಣ
ವಿರಾಜಪೇಟೆ: ನಗರದ ಮಲಬಾರ್ ರಸ್ತೆ ಹಾಗೂ ಮಟನ್ ಮಾರ್ಕೆಟ್ ಜಂಕ್ಷನ್ ನಲ್ಲಿ, ಆಟೋ ಚಾಲಕರ ಸಂಘದ ವತಿಯಿಂದ ಅದ್ಧೂರಿಯಾಗಿ ಆಚರಿಸಿದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭಾಗವಹಿಸಿ ಮಾತನಾಡಿದರು.
ಇಂದಿನ ಈ ಮಹತ್ವದ ದಿನದ ಅರಿವು, ಇಂದು ಪ್ರತಿಯೊಬ್ಬ ಭಾರತೀಯನಿಗೆ ಇರಬೇಕಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜನರಿಗೆ ಸೇವೆ ನೀಡುವ ಆಟೋ ಚಾಲಕರ ವತಿಯಿಂದ ಆಚರಿಸುತ್ತಿರುವ ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವುದಕ್ಕೆ ತನಗೆ ಅತ್ಯಂತ ಸಂತಸ ಆಗುತ್ತಿದೆ ಎಂದು ಬಣ್ಣಿಸಿದರು. ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣವನ್ನು ಅತ್ಯಂತ ಮನದಟ್ಟುವಂತೆ ವಿವರಿಸಿದ ಶಾಸಕರು, ನಮಗೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ದೇಶದ ವೀರ ಜನತೆ ಹಾಕಿಕೊಟ್ಟ ಬುನಾದಿಯಲ್ಲಿ, ತೋರಿಸಿಕೊಟ್ಟ ಉತ್ತಮ ಸ್ವತಂತ್ರ ಸಮಾಜದ ಪರಿಕಲ್ಪನೆಯಲ್ಲಿ ನಾವೆಲ್ಲರೂ ಮುನ್ನುಗ್ಗಬೇಕಾಗಿದೆ ಎಂದು ಕರೆ ನೀಡಿದರು. ನಮ್ಮ ಸಹ ದೇಶವಾಸಿಗಳನ್ನು ಅಕ್ಕರೆಯಿಂದ ಸಹಬಾಳ್ವೆಯೊಂದಿಗೆ ಬಾಳಿ ಬದುಕುವುದೇ ನಿಜವಾದ ಸ್ವಾತಂತ್ರ್ಯ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆ ಸದಸ್ಯರು ಹಾಗೂ ಆಟೋ ಚಾಲಕರು ಹಾಗೂ ಪ್ರಮುಖರು ಇದ್ದರು.