ದೇವಾಲಯದ ಬಳಿ ಅಮಾನವೀಯ ಕೃತ್ಯ; ಮುಳ್ಳಿನ ಪೊದೆಯಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗು

Dec 31, 2025 - 01:13
 0  1.6k
ದೇವಾಲಯದ ಬಳಿ ಅಮಾನವೀಯ ಕೃತ್ಯ; ಮುಳ್ಳಿನ ಪೊದೆಯಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗು
Photo credit: TV09 (ಕೊಪ್ಪಳದಲ್ಲಿ ಸಿಕ್ಕ ಹೆಣ್ಣು ಮಗು)

ಕೊಪ್ಪಳ, ಡಿ.30: ಕೊಪ್ಪಳ ತಾಲ್ಲೂಕಿನ ಐತಿಹಾಸಿಕ ಹುಲಿಗೆಮ್ಮ ದೇವಾಲಯದ ಸಮೀಪ ನವಜಾತ ಹೆಣ್ಣು ಮಗುವನ್ನು ಮುಳ್ಳಿನ ಪೊದೆಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ದೇವಾಲಯದ ಪಕ್ಕದ ಪೊದೆಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಹೋಮ್‌ಗಾರ್ಡ್ ಸಿಬ್ಬಂದಿ, ತಕ್ಷಣವೇ ಶಿಶುವನ್ನು ರಕ್ಷಿಸಿ ಹುಲಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಮಗು ಜನಿಸಿ ಒಂದು ದಿನವಷ್ಟೇ ಆಗಿರಬಹುದೆಂದು ವೈದ್ಯರು ಅಂದಾಜಿಸಿದ್ದಾರೆ.

ಮುಳ್ಳಿನ ಪೊದೆಯಲ್ಲಿ ಬಿದ್ದಿದ್ದರಿಂದ ಮಗುವಿಗೆ ಮುಳ್ಳು ಚುಚ್ಚಿಕೊಂಡ ಗಾಯಗಳಾಗಿದ್ದು, ದೇಹದ ಮೇಲೆ ಹುಳುಗಳು ಮೆತ್ತಿಕೊಂಡಿದ್ದವು. ಹಸಿವು ಮತ್ತು ನೋವಿನಿಂದ ಮಗು ತೀವ್ರವಾಗಿ ನರಳುತ್ತಿದ್ದುದಾಗಿ ತಿಳಿದುಬಂದಿದೆ. ಸಮಯಕ್ಕೆ ಸರಿಯಾಗಿ ಹೋಮ್‌ಗಾರ್ಡ್ ಸಿಬ್ಬಂದಿ ಸ್ಪಂದಿಸಿದ ಪರಿಣಾಮ ಶಿಶುವಿನ ಜೀವ ಉಳಿದಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸುಮಾರು 2.4 ಕಿಲೋಗ್ರಾಂ ತೂಕ ಹೊಂದಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹುಳು ಕಚ್ಚಿದ ಪರಿಣಾಮ ಸೋಂಕಿನ ಸಾಧ್ಯತೆ ಇರುವುದರಿಂದ ತಜ್ಞರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಕುರಿತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಪೋಷಕರ ಪತ್ತೆಗೆ ತನಿಖೆ ಮುಂದುವರಿದಿದ್ದು, ಪೋಷಕರು ಪತ್ತೆಯಾಗದಿದ್ದಲ್ಲಿ ಕಾನೂನುಬದ್ಧವಾಗಿ ದತ್ತು ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 4
Sad Sad 2
Wow Wow 0