ಮಹರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ದಸರಾ ಮುನ್ನಡೆಸಿದ್ದು ಟಿಪ್ಪು ಸುಲ್ತಾನ್: ಶಾಸಕ ತನ್ವೀರ್ ಸೇಠ್

Aug 25, 2025 - 19:40
Aug 25, 2025 - 19:47
 0  246
ಮಹರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ದಸರಾ ಮುನ್ನಡೆಸಿದ್ದು ಟಿಪ್ಪು ಸುಲ್ತಾನ್: ಶಾಸಕ ತನ್ವೀರ್ ಸೇಠ್

ಮೈಸೂರು: ದಸರಾ ಉತ್ಸವ ಜಾತಿ- ಧರ್ಮಕ್ಕೆ ಸೀಮಿತವಾಗಿಲ್ಲ, ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಕರೆಯುತ್ತೇವೆ ಎಂದು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನವನ್ನು ಶಾಸಕ ತನ್ವೀರ್ ಸೇಠ್ ಸಮರ್ಥಿಸಿಕೊಂಡರು.

ಮೈಸೂರು ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯದುವಂಶದ ಮಹರಾಜರು ಪಟ್ಟದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಮುನ್ನಡೆಸಿದ್ದು ಹೈದಾರಲಿ ಹಾಗೂ ಟಿಪ್ಪು ಸುಲ್ತಾನ್ ಇದನ್ನು ಮರೆಯಬಾರದು ಎಂದು ಹೇಳಿದರು. ಕಾದಂಬರಿಕಾರ ಎಸ್.ಎಲ್.ಭೈರಪ್ಪ ಉದ್ಘಾಟನೆ ಮಾಡುವ ವೇಳೆ ನಾವು ಯಾರು ವಿರೋಧ ಮಾಡಲಿಲ್ಲ. ಇದು ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿಯೇ ದಸರಾ ಉದ್ಘಾಟನೆ ಮಾಡುತ್ತೇವೆ. ನಮ್ಮ ನಂಬಿಕೆ ಏನು ಎಂಬುದನ್ನು ಎಲ್ಲರಿಗೂ ತೋರಿಸಲು ಸಾಧ್ಯವಿಲ್ಲ ಎಂದರು.

ಟೀಕೆ ಮಾಡುವವರು ತಾಳ್ಮೆಯಿಂದ ಇರಬೇಕು, ಬೆಂಕಿಯ ಕಾವು ಕಾಯಿಸಿಕೊಳ್ಳಲು ಹೋಗಿ ಅದರಲ್ಲಿಯೇ ಸುಟ್ಟುಹೋಗಬೇಡಿ ಎಂದು ಹೇಳಿದರು. ಸದನದಲ್ಲಿ ಡಿ.ಕೆ.ಶಿವಕುಮಾರ್ ಆರ್.ಎಸ್.ಎಸ್ ಗೀತೆ ಹಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಬೇರೆ ರಾಜಕೀಯ ಪಕ್ಷದ ಸಿದ್ಧಾಂತ ಅರ್ಥಮಾಡಿಕೊಂಡರೆ ತಪ್ಪೇನಿದೆ. ಡಿ.ಕೆ.ಶಿವಕುಮಾರ್ ಆರ್.ಎಸ್.ಎಸ್ ಗೀತೆ ಹಾಡಿದರೆ ಬಿಜೆಪಿ ಪರ ಎಂದರ್ಥವಲ್ಲ, ಈ ಬಗ್ಗೆ ಕೆ.ಎನ್.ರಾಜಣ್ಣ ಟೀಕೆ ಮಾಡಿರುವುದು ಸರಿಯಲ್ಲ. ಈ ರೀತಿಯ ಹೇಳಿಕೆಗಳಿಂದಲೇ ಅವರು ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು. ಧರ್ಮಸ್ಥಳದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು, ಎಸ್.ಐ.ಟಿ. ತನಿಖೆ ಸರಿ-ತಪ್ಪು ಎಂದು ಹೇಳುವುದು ಸರಿಯಲ್ಲ. ದೂರುದಾರನ ಮಂಪರು ಪರೀಕ್ಷೆ ಅಗತ್ಯವಿದೆ. ಇಂತದೊಂದು ದೊಡ್ಡ ಧಾರ್ಮಿಕ ಸಂಸ್ಥೆ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಇದರ ಹಿಂದೆ ಯಾರದೋ ಕೈವಾಡವಿದೆ. ಅದು ಯಾರೇ ಆದರು ಅವರಿಗೆ ಶಿಕ್ಷೆ ಆಗಬೇಕು. ಇಂತಹ ಕೆಲಸ ಮಾಡುವವರಿಗೆ ಜಾತಿ-ಧರ್ಮ ಇರುವುದಿಲ್ಲ ಎಂದು ಹೇಳಿದರು.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 0