ಚನ್ನಯ್ಯನಕೋಟೆ ಗ್ರಾ.ಪಂ ಅಧ್ಯಕ್ಷರಾಗಿ ಜಯಲಕ್ಷ್ಮಿ, ಉಪಾಧ್ಯಕ್ಷರಾಗಿ ವಿಜು ಅವಿರೋಧ ಆಯ್ಕೆ
ಸಿದ್ದಾಪುರ :ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪ್ರತಿಸರ್ಧಿಗಳಿಲ್ಲದ ಕಾರಣ ಅಧ್ಯಕ್ಷರಾಗಿ ವೈ.ಆರ್ ಜಯಲಕ್ಷ್ಮಿ ಹಾಗೂ ಉಪಾಧ್ಯಕ್ಷರಾಗಿ ಎಂ ಎನ್ ವಿಜುಅವಿರೋಧವಾಗಿ ಆಯ್ಕೆಯಾಗಿದ್ದಾರೆ. 17 ಸದಸ್ಯರುಗಳಿರುವ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷೆ ಆಕಾಂಕ್ಷಿಯಾಗಿ ವೈ ಆರ್ ಜಯಲಕ್ಷ್ಮಿ ಹಾಗೂ ಉಪಾಧ್ಯಕ್ಷರ ಆಕಾಂಕ್ಷಿಯಾಗಿ ಎಂ ಎನ್ ವಿಜು ನಾಮಪತ್ರ ಸಲ್ಲಿಸಿದರುನಾಮಪತ್ರ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು ಪ್ರತಿಸ್ಪರ್ಧಿಗಳಿಲ್ಲದ ಕಾರಣ ಅಧ್ಯಕ್ಷರಾಗಿ ಜಯಲಕ್ಷ್ಮಿ ಹಾಗೂ ಉಪಾಧ್ಯಕ್ಷರಾಗಿ ಎಂ ಎನ್ ವಿಜು ಅವರನ್ನ ಅವಿರೋಧವಾಗಿ ಆಯ್ಕೆಯ ಘೋಷಣೆ ಮಾಡಿದರು.17 ಸದಸ್ಯರ ಪೈಕಿ ಓರ್ವ ಸದಸ್ಯೆ ಗೈರಾಜರಾಗಿದ್ದರು. ವಿರಾಜಪೇಟೆ ತಾಸಿಲ್ದಾರ್ ಹಾಗೂ ಚುನಾವಣಾಧಿಕಾರಿಯಾಗಿದ್ದ ಪಿ ಸಿ ಪ್ರವೀಣ್ ಚುನಾವಣಾ ಪ್ರಕ್ರಿಯೆ ನಡೆಸಿದರು ಈ ಸಂದರ್ಭ ಅಧಿಕಾರಿಗಳಾದ ಗಣೇಶ್, ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಗ್ರಾಮ ಆಡಳಿತ ಅಧಿಕಾರಿ ಶ್ರೀಕಾಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ನೂತನ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ 2 ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು ಇದೀಗ ಪಂಚಾಯಿತಿ ಅಡಳಿತ ಮಂಡಳಿ ಹಾಗೂ ಪಕ್ಷದ ಮುಖಂಡರುಗಳು ಸಹಕಾರದಿಂದ ಅಧ್ಯಕ್ಷೆ ಸ್ಥಾನ ಸಿಕ್ಕಿದ್ದು ಸದಸ್ಯರುಗಳು ವಿಶ್ವಾಸದೊಂದಿಗೆ ಅಭಿವೃದ್ಧಿಗೆ ಶ್ರಮಿಸುವದಾಗಿ ತಿಳಿಸಿದರು. ಉಪಾಧ್ಯಕ್ಷ ಎಂ ಎನ್ ವಿಜು ಮಾತನಾಡಿ ಸದಸ್ಯರುಗಳು ಹಾಗೂ ಮುಖಂಡರುಗಳ ನಿರ್ಧಾರದಂತೆ ಅಯ್ಕೆಯಾಗಿದ್ದು 2 ಬಾರಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ ಇದೀಗ ಉಪಾಧ್ಯಕ್ಷರಾಗಿ ಅಯ್ಕೆ ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುವದಾಗಿ ಹೇಳಿದರು.
ನಿರ್ಗಮಿತ ಮಾಜಿ ಅಧ್ಯಕ್ಷ ಮೇಕೆರೀರ ಅರುಣ್ ಕುಮಾರ್ ಮಾತನಾಡಿ ಕಳೆದ ಎರಡುವರೆ ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು ನೂತನ ಅಧ್ಯಕ್ಷರು ಉಪಾಧ್ಯಕ್ಷರ ನೇತೃತ್ವದ ಆಡಳಿತದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದರು. ಬಹುತೇಕ ಬಿಜೆಪಿ ಬೆಂಬಲಿತ ಸದಸ್ಯರು ಹೊಂದಿರುವ ಪಂಚಾಯಿತಿ ಆಡಳಿತಕ್ಕೆ ಅಧ್ಯಕ್ಷರು -ಉಪಾಧ್ಯಕ್ಷರ ಆಯ್ಕೆ ಬಗ್ಗೆ ಆಕಾಂಕ್ಷಿಗಳ ಪೈಪೋಟಿ ಇತ್ತಾದರೂ ಪಕ್ಷದ ಮುಖಂಡರುಗಳ ನಿರ್ಧಾರದಂತೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ ಎಂದು ಬಿಜೆಪಿ ಮುಖಂಡ ರತೀಶ್ ಕುಮಾರ್ ತಿಳಿಸಿದ್ದಾರೆ. ಇದೇ ಸಂದರ್ಭ ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರುಗಳಿಗೆ ಪಂಚಾಯಿತಿ ಸದಸ್ಯರುಗಳು ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಯ್ಕೆಯಾದವರಿಗೆ ಶುಭ ಹಾರೈಸಿ ಹೂವಿನ ಹಾರ ಹಾಕಿ ಸಂಭ್ರಮಿಸಿದರು.