ಡ್ಯೂಟಿ ನೀಡದೆ ಕಿರುಕುಳ ಆರೋಪ;ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ; ಬಸ್‌ ನಲ್ಲೇ ಮೃತದೇಹ ರವಾನೆ

Jan 8, 2026 - 23:47
 0  1.8k
ಡ್ಯೂಟಿ ನೀಡದೆ ಕಿರುಕುಳ ಆರೋಪ;ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ; ಬಸ್‌ ನಲ್ಲೇ ಮೃತದೇಹ ರವಾನೆ
Photo credit: TV09 (ಆತ್ಮಹತ್ಯೆ ಮಾಡಿಕೊಂಡ ಚಾಲಕ)

ಶಿವಮೊಗ್ಗ, ಜ. 8: ಡಿಪೋ ಮ್ಯಾನೇಜರ್ ಡ್ಯೂಟಿ ನೀಡದೆ ಕಿರುಕುಳ ನೀಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಬಸ್ ಚಾಲಕರೊಬ್ಬ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾಗಪ್ಪ (54) ಎಂದು ಗುರುತಿಸಲಾಗಿದೆ. ಅವರು ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ತ್ಯಾಗರ್ತಿ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ಒಂದೂವರೆ ತಿಂಗಳಿಂದ ಅವರಿಗೆ ಡ್ಯೂಟಿ ನೀಡಲಾಗುತ್ತಿರಲಿಲ್ಲ. ಈ ಬಗ್ಗೆ ಮರುಮರು ಮನವಿ ಮಾಡಿದರೂ ಸ್ಪಂದನೆ ಸಿಗದೆ ತೀವ್ರ ಮನನೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಕಳೆದ ಸೋಮವಾರ ನಾಗಪ್ಪ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಾಲ್ಕು ದಿನಗಳ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ನಾಗಪ್ಪ ಅವರ ಅಂತಿಮ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ನೌಕರರು ಆಗಮಿಸಿದ್ದರು. ಬಳಿಕ ಮೃತದೇಹವನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಅವರ ಸ್ವಗ್ರಾಮಕ್ಕೆ ರವಾನೆ ಮಾಡಲಾಯಿತು. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 3
Wow Wow 2