ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ, ಆ.27: ಮಹಿಳೆಯು ತನ್ನ ಅನುಭವವನ್ನು ಮಾತ್ರ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವುದಿಲ್ಲ, ಸಂಸ್ಕೃತಿಗೆ ದಾಖಲೆಯನ್ನು, ಪ್ರಕೃತಿಗೆ ಕಾವ್ಯವನ್ನು, ಬದುಕಿಗೆ ಹೊಸ ಅರ್ಥವನ್ನು ಎಲ್ಲಕ್ಕಿಂತ ಮಿಗಿಲಾಗಿ ತನ್ನ ಗಟ್ಟಿ ಸಾಹಿತ್ಯದ ಧ್ವನಿಯನ್ನು ನೀಡುತ್ತಾಳೆ ಎಂದು ಕವಯಿತ್ರಿ, ಸಾಹಿತಿ ಲೀಲಾಕುಮಾರಿ
ತೊಡಿಕಾನ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ದಿ.ಪಾಣತ್ತಲೆ ಶ್ರೀ ಅಣ್ಣಯ್ಯ ಮತ್ತು ಶ್ರೀಮತಿ ಚಿನ್ನಮ್ಮ ಸ್ಮರಣಾರ್ಥ ಏರ್ಪಡಿಸಿದ್ದ ಕೊಡಗಿನಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಮಹಿಳಾ ಸಾಹಿತಿಗಳ ಕೊಡುಗೆಗಳು" ಎಂಬ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಮಹಿಳಾ ಸಾಹಿತಿಗಳ ಸಾಹಿತ್ಯ ರಚನೆ ಕುರಿತು ಮಾತನಾಡಿದರು.
ಕೊಡಗಿನ ಮಹಿಳಾ ಸಾಹಿತಿಗಳ ಪರಿಚಯದೊಂದಿಗೆ ಕನ್ನಡ ಸಾಹಿತ್ಯಕ್ಕೆ ಅವರದೇ ಆದ ವಿಶೇಷ ಕೊಡುಗೆಗಳನ್ನು ಸ್ಮರಿಸಿಕೊಂಡು ಮಾತನಾಡಿದ ಅವರು, ಕನ್ನಡದ ಮೊದಲ ಕತೆಗಾರ್ತಿ ಎನಿಸಿದ ಕೊಡಗಿನ ಗೌರಮ್ಮ ಅವರು ಸ್ತ್ರೀವಾದಿ ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿಯ ಬೆಂಬಲಿಗರಾಗಿದ್ದರು ಎಂದು ಬಣ್ಣಿಸಿದರು.
ಕನ್ನಡದ ಮೊದಲ ಕಥೆಗಾರ್ತಿ ಕೊಡಗಿನ ಗೌರಮ್ಮ ಮಹಿಳಾಪರ ಕಥೆಗಳನ್ನು ಬರೆದು ಮಹಿಳೆಯರಿಗೆ ಆಗುತ್ತಿದ್ದ ಶೋಷಣೆ ವಿರುದ್ಧ ಕಥೆಗಳ ಮೂಲಕ ಧ್ವನಿ ಎತ್ತಿದ ಕಥೆಗಾರ್ತಿ. ಮಹಿಳೆಯರ ಸಾಮಾಜಿಕ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದವರಲ್ಲಿ ಗೌರಮ್ಮ ಮೊದಲಿಗ ಕಥೆಗಾರ್ತಿ ಎನಿಸಿದ್ದಾರೆ ಎಂದರು.
ಅಲ್ಲದೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಡಗಿಗೆ ಭೇಟಿ ನೀಡಿದ್ದ
ಮಹಾತ್ಮ ಗಾಂಧೀಜಿ ಅವರು
ತಮ್ಮ ಮನೆಗೆ ಬರಬೇಕು ಎಂಬ ಬೇಡಿಕೆಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲಿಸಿ
ಗುಂಡುಕಟ್ಟಿಯ ತಮ್ಮ ಮನೆ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿ ಅವರು
ಸರಳ ಜೀವನ ನಡೆಸುತ್ತಿದ್ದ ಗೌರಮ್ಮ ಮನೆಗೆ ಭೇಟಿ ನೀಡಿದಾಗ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಬಳಿಯಿದ್ದ ಚಿನ್ನಾಭರಣಗಳನ್ನು ಗಾಂಧೀಜಿ ಅವರಿಗೆ ದಾನ ನೀಡುವ ಮೂಲಕ ಬದುಕಿನಲ್ಲಿ ಸರಳತೆ ಸಾರಿದ ಧೀಮಂತ ಮಹಿಳೆ ಕೊಡಗಿನ ಗೌರಮ್ಮ
ಸಾಹಿತ್ಯದಿಂದಾಗಿ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದು ಲೀಲಾಕುಮಾರಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕ.ಸಾ.ಪ.)
ಅಧ್ಯಕ್ಷ ಎಂ.ಪಿ.ಕೇಶವಕಾಮತ್,
ಕನ್ನಡ ಭಾಷಾಭಿಮಾನದ ಮೂಲಕ ಕುಟುಂಬದ ಹಿರಿಯರ ಹೆಸರಿನಲ್ಲಿ ಠೇವಣಿ ಇಟ್ಟರೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪ್ರತಿ ವರ್ಷ ದತ್ತಿ ಉಪನ್ಯಾಸ ಆಯೋಜಿಸ
ಲಾಗುವುದು. ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುವುದರೊಂದಿಗೆ ಹೊಸ ವಿಚಾರಗಳನ್ನು ತಿಳಿಸಿ ಕನ್ನಡತನವನ್ನು ಬೆಳೆಸುವ ಕಾರ್ಯ ಮಾಡುತ್ತದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚು ಮಹಿಳಾ ಬರಹಗಾರರು, ಸಾಹಿತ್ಯಕಾರರು ಉತ್ತಮ ಸಾಹಿತ್ಯ ರಚನೆ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಮಹಿಳಾ ಸಾಹಿತ್ಯ ಗಟ್ಟಿಯಾಗಿ ನೆಲೆಯೂರಿದೆ. ಕ.ಸಾ.ಪ. ನಾಡು, ನುಡಿ, ಜಲದ ಸಂರಕ್ಷಣೆ, ಕಲೆ, ಸಾಹಿತ್ಯ, ಸಂಗೀತ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ನಮ್ಮ ಮಣ್ಣಿನ ಸೊಗಡು ಶ್ರೀಮಂತಗೊಳಿಸುತ್ತಿದೆ ಎಂದು ಕೇಶವಕಾಮತ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಪೆರುಮಾಳ್ ಮಾತನಾಡಿ, ಬಹುಭಾಷೆ ಮಾತನಾಡುವ ಗಡಿಜಿಲ್ಲೆಯಾದ ಕೊಡಗಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಭಾಷಿಕರೊಂದಿಗೆ ಬೆರೆತು
ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿರುವುದು ಹೆಮ್ಮೆಯ ಸಂಗತಿ ಎಂದರು.
ಕನ್ನಡ ಭಾಷೆ ಇಂದು ಜಾತಿ, ಧರ್ಮ ಹಾಗೂ ಗಡಿಯನ್ನು ಮೀರಿ ಬೆಳೆದಿದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಕನ್ನಡ ಸಾಹಿತ್ಯ ಪರಿಷತ್ತು. ತನ್ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ನಿರಂತರವಾಗಿ ಪೋಷಿಸುತ್ತ ವಿವಿಧ ಕಾರ್ಯಕ್ರಮ ಮೂಲಕ ಮುಂದಿನ ತಲೆಮಾರಿಗೆ ಕನ್ನಡದ ಶ್ರೇಷ್ಠತೆಯನ್ನು ಪರಿಚಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಅತ್ಯಂತ ಶ್ರೀಮಂತ ಕಲೆ, ಸಾಹಿತ್ಯ, ಜನಪದ, ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ
ಕನ್ನಡ ಭಾಷೆ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.ದತ್ತಿ ದಾನಿ ಕುಟುಂಬದ ಸದಸ್ಯರೂ ಆದ ವಿಶ್ರಾಂತ ಪ್ರಾಧ್ಯಾಪಕಿ ದಂಬೆಕೋಡಿ ಸುಶೀಲ ಸುಬ್ರಮಣಿ, ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು ಸಾಹಿತಿಗಳ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಸಾಪ ಸದಸ್ಯೆಯೂ ಆದ ದಾನಿ ಸೂದನ ರತ್ನಾವತಿ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಪಿ.ನವೀನ್ ಕುಮಾರ್, ತಾಲ್ಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಟಿ.ವಿ.ಶೈಲಾ, ನಿರ್ದೇಶಕ ಎಂ.ಎನ್.ಕಾಳಪ್ಪ, ಕೋಶಾಧಿಕಾರಿ ಕೆ.ವಿ.ಉಮೇಶ್ , ದತ್ತಿದಾನಿ ಕುಟುಂಬದ ಸದಸ್ಯ ಕೆ. ವೆಂಕಟೇಶ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
*ಮಕ್ಕಳಿಗೆ ಸ್ಪರ್ಧೆಗಳು*: ಇದೇ ವೇಳೆಯಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಕವನ ರಚನೆಯಲ್ಲಿ ವಿಜೇತಗೊಂಡ ಬಾಲಕಿಯರಿಗೆ ಕನ್ನಡ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು.ಹಾಗೆಯೇ, ವಿದ್ಯಾರ್ಥಿಗಳಿಗೆ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
