ಕೆದಕಲ್; ಮಾನವ -ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವ ಕುರಿತು ಸಭೆ
ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಘಟಿಸುತ್ತಿರುವ ಮಾನವ -ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವ ಕುರಿತು ಮಂಗಳವಾರ ಸಂಜೆ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಡಾ. ಮಂತರ್‌ಗೌಡ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹೊರೂರು, ಮೊದೂರು, ಕೆದಕಲ್ ನೇಗಾದಳ್, ಹಾಲೇರಿ, ಈರಳೆ ಓಳಮುಡಿ ಮತ್ತು ಅತ್ತೂರು ನಲ್ಲೂರು ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳ ರೈತರು ಮತ್ತು ಬೆಳೆಗಾರರು ಹಾಗೂ ಸಾರ್ವಜನಿಕರು ಕಳೆದ ಹಲವು ದಿನಗಳಲ್ಲಿ ಕಾಡಾನೆ, ಕಾಡು ಕೋಣ ಸೇರಿದಂತೆ ವನ್ಯ ಜೀವಿಗಳ ಹಾವಳಿ ಕುರಿತು ಜೀವಭಯ ಹಾಗೂ ಕೃಷಿ ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದ್ದು, ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರ ಮುಂದೆ ಮನವಿ ಸಲ್ಲಿಸಿದರು.
ಲಿಖಿತ ಮನವಿಯನ್ನು ಸಭೆಯಲ್ಲಿ ಓದಿದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಪ್ಪ ಕೋಟ್ಯಾನ್, ಆನೆಕಾಡು ಮತ್ತು ಮೀನುಕೊಲ್ಲಿ ಅರಣ್ಯ ವಲಯಗಳಲ್ಲಿ ಜಂಟಿಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ವಿವಿಧ ವಿಭಾಗಗಳ ಸಮನ್ವಯತೆಯಿಂದ ಕೈಗೊಳ್ಳಬೇಕು. ಈಗಾಗಲೇ ಸಾಕಷ್ಟು ಬಾರೀ ಬೇಡಿಕೆ ಸಲ್ಲಿಸಿರುವಂತೆ ಚೆಟ್ಟಳ್ಳಿ ಫಾರಂ ಬಳಿ ಇರುವ ಆನೆ ಗೇಟನ್ನು ಶಾಶ್ವತವಾಗಿ ಮುಚ್ಚಬೇಕು. ಆನೆ ಕಾರ್ಯಚರಣೆ ಪಡೆಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಅವರಿಗೆ ಸಂಪೂರ್ಣ ತರಬೇತಿ ಮತ್ತು ಅಗತ್ಯವಾದ ಸುರಕ್ಷತ ಉಪಕರಣಗಳನ್ನು ಒದಗಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನದ 24 ಗಂಟೆಯು ನಿಯಂತ್ರಣಕೊಠಡಿಯನ್ನು ಸ್ಥಾಪಿಸಿ ಆನೆ ಓಡಿಸುವ ಸಂದರ್ಭದಲ್ಲಿ ಜೀವ ರಕ್ಷಕ ವಾಹನ ಬೆಂಗಾವಲು ಹಾಗೂ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತು 108 ಅಂಬ್ಯುಲೆನ್ಸ್ ಸೇವೆಯನ್ನು ನಿಯೋಜಿಸುವಂತೆ ಕೋರಿದರು.
ಈ ಸಂದರ್ಭ ಶಾಸಕರು ಅರಣ್ಯ ಇಲಾಖೆಯ ಮಡಿಕೇರಿ ಉಪವಿಭಾಗದ ಕುಶಾಲನಗರ ವಲಯ ಅಧಿಕಾರಿಗಳಲ್ಲಿ ವಿವರ ಮತ್ತು ವಾಸ್ತವ ವಿಚಾರಗಳನ್ನು ಪ್ರಶ್ನಿಸುತ್ತಾ ಇಲಾಖೆಯ ಒಳಗೆ ಅಂತರಿಕವಾಗಿ ಸಮನ್ವಯತೆ ಇಲ್ಲದೆ ಇರುವುದು, ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದೆ ಇರುವುದು ಹಾಗೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದಾಗ ಆಮೆ ವೇಗದಲ್ಲಿ ಅತ್ಯಲ್ಪ ಪರಿಹಾರವನ್ನು ನೀಡುವ ಹಿನ್ನಲೆಯಲ್ಲಿ ಮಾನವ- ವನ್ಯಜೀವಿಗಳಿಂದ ಅತಂಕ ಅರಣ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ಬೇಸರ ಹೊಂದಿದ್ದಾರೆ ಎಂದು ಅವರು ವಿಷಾಧಿಸಿದರು.
ಆನೆ ಓಡಿಸುವ ಕಾರ್ಯಚರಣೆಯು ಶೂನ್ಯ ಫಲಿತಾಂಶವನ್ನು ಹೊಂದಿದ್ದು, ಕೆದಕಲ್ ವ್ಯಾಪ್ತಿಯು ತನ್ನ ಸುತ್ತಲ್ಲೂ ವಿವಿಧ ವಲಯಗಳಿಗೆ ಸೇರಿದ ಅರಣ್ಯ ವ್ಯಾಪ್ತಿಯನ್ನು ಹೊಂದಿದ್ದು, ಇಲಾಖೆಯಲ್ಲಿ ಸಮನ್ವಯತೆಯ ಕೊರತೆ ಇದೆ. ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ ಎಂದು ಹೇಳಿದ ಅವರು ಕುಶಾಲನಗರ ವಲಯ ಅರಣ್ಯಾಧಿಕಾರಿ ನೀಡಿದ ರೂ. 7 ಕೋಟಿಯ ಯೋಜನ ವೆಚ್ಚದ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರದಿಂದ ಮಂಜೂರು ಮಾಡಿಸುವ ಜವಾಬ್ಧಾರಿ ತಮ್ಮದಾಗಿದ್ದು, ಯೋಜನೆಯ ಯಶಸ್ವಿನ ಖಾತರಿಯನ್ನು ನೀಡಬಲ್ಲಿರಾ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.
ಈ ಕುರಿತು ಸಮಜಾಯಿಷಿಕೆ ನೀಡಿದ ಮಡಿಕೇರಿ ಉಪ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು,ಆನೆ ಮಾನವ ಮತ್ತು ಇತರ ವನ್ಯ ಜೀವಿಗಳ ಉಪಟಳವನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲೇ ಒಂದು ಸಮಗ್ರ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರದ ನಿಟ್ಟಿನಲ್ಲಿ 3 ರಿಂದ 4 ವರ್ಷಗಳು ಬೇಕೆಂದು ಮಾಹಿತಿ ನೀಡಿದರು. ಕಾಡಾನೆಗಳ ಸಂಚಾರದ ಕುರಿತು ಮಾಹಿತಿ ನೀಡಿದ ಅವರು, ವಿರಾಜಪೇಟೆಯಿಂದ ಶನಿವಾರಸಂತೆಯವರೆಗೆ ಆನೆ ಕಾರಿಡರ್ ಇದ್ದು ಇದನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲೂ ಕೂಡ ಪ್ರಯತ್ನಗಳು ಆಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಡುಕೋಣಗಳ ಬಗ್ಗೆ ಮಾತನಾಡಿದ ಅವರು, ಕಾಡುಕೋಣಗಳನ್ನು ಹಿಡಿದು ಸ್ಥಳಾಂತರಿಸುವ ಪ್ರಯೋಗಗಳು ಈಗಾಷ್ಟೇ ಆರಂಭವಾಗಿದ್ದು, ಇಲ್ಲಿಯೂ ಕೂಡ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ , ಇತ್ತೀಚೆಗೆ ತಮ್ಮ ತೋಟದಲ್ಲಿ ಕಾಡು ಕೋಣ ದಾಳಿ ಮಾಡಿದ ಹಿನ್ನಲೆಯಲ್ಲಿ ತೋಟ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು ಕೇವಲ ಒಂದು ವಾರದ ಚಿಕಿತ್ಸಾ ರೂ 4.42 ಲಕ್ಷ ವೆಚ್ಚ ದಾಟಿರುವ ಬಗ್ಗೆ ಮಾಹಿತಿ ನೀಡಿ ವನ್ಯ ಜೀವಿಗಳ ದಾಳಿಗೆ ಸಾವು ಸಂಭವಿಸಿದಾಗ ರೂ. 20 ಲಕ್ಷ ನೀಡುವ ಇಲಾಖೆ ಗಾಯಗೊಂಡವರ ಬಗ್ಗೆ ಪರಿಹಾರ ಅಥವಾ ಚಿಕಿತ್ಸಾ ವೇಚ್ಚದ ಬಗ್ಗೆ ತಾತ್ಸಾರವನ್ನು ತಾಳುತ್ತೀರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಡಿಸಿಎಫ್ ಅಭಿಷೇಕ್, ಗಾಯಾಳುಗಳ ಚಿಕಿತ್ಸಾ ವೆಚ್ಚದ ವಿವರ ನೀಡಿದ್ದಲ್ಲಿ ಭರಿಸಲಾಗುವುದೆಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕರು ವನ್ಯಜೀವಿ ದಾಳಿ, ಅಸ್ತಿಪಾಸ್ತಿ ಹಾನಿ, ಮೊದಲಾದವುಗಳಿಗೆ ಸರ್ಕಾರ ನಿಗಧಿ ಪಡಿಸಿದ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲ ತಾಣದಲ್ಲಿರುವ ಗುಂಪಿನಲ್ಲಿ ಹಂಚಿಕೊಳ್ಳುವಂತೆ ನಿರ್ದೇಶನ ನೀಡಿದರು. ಪುಲ್ಲೇರ ವಸಂತ್ ಅವರು ಮಾತನಾಡಿ, ಸರಿ ಸುಮಾರು 70 ಕಾಡುಕೋಣಗಳ ಗುಂಪು 5 ರಿಂದ 6 ತಂಡಗಳಾಗಿದ್ದು, ಇವುಗಳೊಂದಿಗೆ ಕಾಡು ದನಗಳು ಸೇರಿಕೊಂಡಿದ್ದು ಬದುಕು ಮತ್ತು ಕೃಷಿ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅದ್ಯಕ್ಷ ತೀತಿರ ಧರ್ಮಜ ಉತ್ತಪ್ಪ,ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಿ.ಪಂ. ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಸೋಮವಾರಪೇಟೆ ತಹಶೀಲ್ಧಾರ್ ಕೃಷ್ಣಮೂರ್ತಿ, ವಲಯ ಸಂರಕ್ಷಣಾಧಿಕಾರಿ ರಕ್ಷಿತ್, ಮಡಿಕೇರಿ ವಲಯ ಸಂರಕ್ಷಣಾಧಿಕಾರಿ ಶಿವಕುಮಾರ್, ಸಹಾಯಕ ವಲಯ ಸಂರಕ್ಷಣಾಧಿಕಾರಿ ಮಧುಕುಮಾರ್, ಕೆದಕಲ್ ಗ್ರಾ.ಪಂ. ಆಡಳಿತಾಧಿಕಾರಿ ಹರೀಶ್, ಕಾರ್ಯದರ್ಶಿ ಮೋಹನ್, ಸುಂಟಿಕೊಪ್ಪ ಸೆಸ್ಕ್ ಅಭಿಯಂತರ ಲವ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಮಾಜಿ ಸದಸ್ಯರುಗಳಾದ ದೇವಿ ಪ್ರಸಾದ್,ಶಿವಶಂಕರ್, ಬಾಲಕೃಷ್ಣ ರೈ, ಚೆಪ್ಪುಡೀರ ಸತೀಶ್, ಯಂಕನ ಗೋಪಿನಾಥ್ ಮತ್ತಿತರರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
