ನವೆಂಬರ್ 1 ರಂದು ಭಾರತದ ಮೊದಲ ತೀವ್ರ ಬಡತನಮುಕ್ತ ರಾಜ್ಯವಾಗಿ ಘೋಷಣೆಯಾಗಲಿರುವ ಕೇರಳ

ನವೆಂಬರ್ 1 ರಂದು ಭಾರತದ ಮೊದಲ ತೀವ್ರ ಬಡತನಮುಕ್ತ ರಾಜ್ಯವಾಗಿ ಘೋಷಣೆಯಾಗಲಿರುವ ಕೇರಳ
ಕೇರಳ‌ ಸಿ.ಎಂ ಪಿಣರಾಯಿ ವಿಜಯನ್

ತಿರುವನಂತಪುರ, ಅ.23: ಕೇರಳವು ನವೆಂಬರ್ 1 ರಂದು ಭಾರತದ ಮೊದಲ ತೀವ್ರ ಬಡತನಮುಕ್ತ ರಾಜ್ಯವೆಂಬ ಗೌರವವನ್ನು ಪಡೆಯಲಿದೆ. ರಾಜ್ಯದ ಸ್ಥಾಪನಾ ದಿನದ ಅಂಗವಾಗಿ ತಿರುವನಂತಪುರದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಐತಿಹಾಸಿಕ ಘೋಷಣೆ ಮಾಡಲಿದ್ದಾರೆ.

ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯದ ಎಲ್ಲಾ ಸಚಿವರು, ವಿರೋಧ ಪಕ್ಷದ ನಾಯಕರು, ಮತ್ತು ಚಲನಚಿತ್ರ ತಾರೆಯರಾದ ಕಮಲ್ ಹಾಸನ್, ಮಮ್ಮುಟ್ಟಿ ಹಾಗೂ ಮೋಹನ್ ಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಸಚಿವ ಎಂ.ಬಿ. ರಾಜೇಶ್ ಮತ್ತು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕೇರಳವು ತೀವ್ರ ಬಡತನ ನಿರ್ಮೂಲನೆಯ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಿಸುತ್ತಿದೆ. ಈ ಸಾಧನೆಯಿಂದ ಕೇರಳವು ದೇಶದ ಮೊದಲ ತೀವ್ರ ಬಡತನಮುಕ್ತ ರಾಜ್ಯವಾಗುವುದರ ಜೊತೆಗೆ, ವಿಶ್ವದ ಎರಡನೇ ಪ್ರದೇಶವಾಗಲಿದೆ,”ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಈ ಮೈಲಿಗಲ್ಲಿನ ಸಂಭ್ರಮವನ್ನು ಆಚರಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ತೀವ್ರ ಬಡತನ ಎಂದರೇನು?

ತೀವ್ರ ಬಡತನ ಎಂದರೆ ವ್ಯಕ್ತಿಗಳು ಅಥವಾ ಕುಟುಂಬಗಳು ಆಹಾರ, ವಸತಿ, ಬಟ್ಟೆ, ಆರೋಗ್ಯ ಹಾಗೂ ಶಿಕ್ಷಣದಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಅಸಮರ್ಥವಾಗಿರುವ ಸ್ಥಿತಿ.

ವಿಶ್ವ ಬ್ಯಾಂಕ್ ಪ್ರಕಾರ, ದಿನಕ್ಕೆ ಪ್ರತಿ ವ್ಯಕ್ತಿಯು $2.15 (ಸುಮಾರು ₹180) ಕ್ಕಿಂತ ಕಡಿಮೆ ಆದಾಯದಲ್ಲಿ ಬದುಕುವವರನ್ನು ತೀವ್ರ ಬಡವರಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ನೀತಿ ಆಯೋಗವು ಬಹು ಆಯಾಮದ ಬಡತನ ಸೂಚ್ಯಂಕ (MPI) ಮೂಲಕ ಪೋಷಣೆ, ವಸತಿ, ನೈರ್ಮಲ್ಯ, ಶಿಕ್ಷಣ ಮತ್ತು ಮೂಲಭೂತ ಸೇವೆಗಳ ಲಭ್ಯತೆಯ ಆಧಾರವಾಗಿ ಬಡತನದ ಪ್ರಮಾಣವನ್ನು ಅಳೆಯುತ್ತದೆ.