ಕೊಡಗು ಕಾಂಗ್ರೆಸ್ ನಿಂದ ಇಂದಿರಾಗಾಂಧಿ ಸಂಸ್ಮರಣೆ ಹಾಗೂ ಸರ್ದಾರ್ ಪಟೇಲ್ ಜನ್ಮದಿನಾಚರಣೆ: ಜಗತ್ತಿನ ದಿಟ್ಟ ಮಹಿಳೆ ಇಂದಿರಾ ಗಾಂಧಿ: ತೆನ್ನಿರ ಮೈನಾ ವ್ಯಾಖ್ಯಾನ
ಮಡಿಕೇರಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಭಾರತದ ಉಕ್ಕಿನ ಮಹಿಳೆ ಮಾತ್ರ ಆಗಿರಲಿಲ್ಲ.ಜಗತ್ತಿನ ಅತ್ಯಂತ ದಿಟ್ಟ ಮಹಿಳೆಯಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ವ್ಯಾಖ್ಯಾನಿಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಲಾದ ಇಂದಿರಾಗಾಂಧಿ ಸಂಸ್ಮರಣೆ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಎರಡನೇ ಮಹಾಯುದ್ದದ ನಂತರ ಅಮೇರಿಕಾ ಜಗತ್ತಿನ ಪಾಳೆಗಾರನಾಗಿ ಬದಲಾಗಿದ್ದ ಸಂಧರ್ಭದಲ್ಲಿ ಅಮೇರಿಕಾದ ಅಧ್ಯಕ್ಷ ನಿಕ್ಸನ್ ರ ವಿರುಧ್ದ ಸೆಡ್ಡು ಹೊಡೆದು ಇಂದಿರಾ ಗಾಂಧಿ ಅಮೇರಿಕ ಭಾರತದ ಯಜಮಾನ ಆಗಲು ಸಾಧ್ಯವಿಲ್ಲಾ ಎಂದು ಗುಡುಗಿದ್ದರು.
1971 ರಲ್ಲಿ ಪಾಕಿಸ್ಥಾನದೊಂದಿಗೆ ಯುದ್ದ ಹೂಡಿ ಬಾಂಗ್ಲಾ ವಿಮೋಚನೆ ಮೂಲಕ 95 ಸಾವಿರ ಪಾಕ್ ಸೈನಿಕರ ಶರಣಾಗತಿಯೊಂದಿಗೆ ಭಾರತಕ್ಕೆ ಗೆಲುವು ದಾಖಲಿಸಲು ಇಂದಿರಾಗಾಂಧಿ ಯವರ ದಿಟ್ಟ ನಿರ್ಧಾರಗಳು ಕಾರಣ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಮಹಾತ್ಮ ಗಾಂಧಿಯವರ ಸಮಕಾಲೀನ ನಾಯಕರಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ರವರು ಭಾರತದ ಪ್ರಥಮ ಉಪ ಪ್ರಧಾನಿಯಾಗಿ ,ಗೃಹ ಸಚಿವರಾಗಿ ಹರಿದು ಹೋಗಿದ್ದ ದೇಶವನ್ನು ಒಂದುಗೂಡಿಸಿ ಐಕೈತೆಯ ಸಾಧನೆ ಮಾಡಿದವರು .ಆಪರೇಶನ್ ಪೋಲೋ ಮೂಲಕ ಹೈದರಾಬಾದ್ ವಿಮೋಚನೆಯಾಗಿದ್ದು ಪಟೇಲರ ಕೊಡುಗೆಯಾಗಿದೆ. ದೇಶದ ಶಾಂತಿ ಸಮಗ್ರತೆಗೆ ಧಕ್ಕೆ ಯಾದಾಗ 1948 ರ ಫೆಬ್ರವರಿ 4 ರಂದು ಪಟೇಲರು ಆರ್.ಎಸ್.ಎಸ್ ಬ್ಯಾನ್ ಮಾಡಿದ್ದರು ಎಂದು ಸ್ಮರಿಸಿದ ತೆನ್ನಿರ ಮೈನಾ ರವರು ಇದನ್ನು ಮರೆಮಾಚಲು ಇಂದು ಬಿಜೆಪಿ ಯವರು ಸರ್ದಾರ್ ಪಟೇಲರನ್ನು ಹೈಜಾಕ್ ಮಾಡಲು ಹೊರಟಿದ್ದಾರೆ ಎಂದು ಮೂದಲಿಸಿದರು.
ಇಂದಿರಾ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರು ಅಪ್ಪಟ ಕಾಂಗ್ರೆಸ್ಸಿಗರಾಗಿದ್ದು ಮಹಾನ್ ವ್ಯಕ್ತಿಗಳ ಕೊರತೆಯಿಂದ ಬಳಲುತ್ತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಜಪ ಮಾಡಿದರೂ ಅಚ್ಚರಿಯಿಲ್ಲ ಎಂದು ಟೀಕಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ರವರು ಇಂದಿರಾ ಗಾಂಧಿ ಹಾಗೂ ವಲ್ಲಭಾಯಿ ಪಟೇಲರ ಆದರ್ಶಗಳನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ನವರು ಇಂದಿರಾ ಗಾಂಧಿ ವೃತ್ತದಲ್ಲಿ ಇಂದಿರಾ ಪ್ರತಿಮೆ ಅಳವಡಿಕೆಗೆ ನಗರ ಸಭೆಯಲ್ಲಿ ಹಿಂದೆಯೇ ನಿರ್ಣಯವಾಗಿದ್ದು ಅದರ ಬಗ್ಗೆ ಪ್ರಸ್ತಾಪಿಸುವ ಭರವಸೆ ನೀಡಿದರು. ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮಾತನಾಡಿ ಇಂದಿರಾ ಹಾಗೂ ಪಟೇಲರ ಕೊಡುಗೆಗಳ ಬಗ್ಗೆ ವಿವರಿಸಿದರು.
ಕಾಂಗ್ರೆಸ್ ಸೇವಾದಳದ ಜಿಲ್ಲಾ ಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಜಿ.ಪೀಟರ್,ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ,ನಗರ ಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ, ಪ್ರಮುಖರಾದ ಶ್ರೀಮತಿ ಶಶಿ,ಕಲೀಲ್ ಬಾಷ,ಪಿಯುಸ್ ಫರೇರ,ಸುಭಾಷ್ ಆಳ್ವ,ವಸಂತ್ ಭಟ್,ಅರ್ಜುನ್ ,ಮುಮ್ತಾಜ್ ಬೇಗಂ,ಅಯಾತ್, ತಂಗಮ್ಮ,ಮೋಹನ್ ಮೌರ್ಯ,ಸುಮಿತ್ರ,ಶಾಹಿದ್ ಬಾದಷಾ,ನಜೀರ್ ಹುಸೇನ್,ಸುಬ್ರಮಣಿ ಹೆಚ್.ಕೆ,ರಾಜು,ಸುಖೈ ಮೊಹಮ್ಮದ್, ಗಫೂರ್,ಸೈಮನ್, ರಾಣಿ,ಉಷಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.