ಸಿ& ಡಿ ಜಾಗದ ಸಮಸ್ಯೆ ಬಗ್ಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ

ಸಿ& ಡಿ ಜಾಗದ ಸಮಸ್ಯೆ ಬಗ್ಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ

ಮಡಿಕೇರಿ:ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿದ್ದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಇಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ, ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ರವರನ್ನು ಭೇಟಿ ಮಾಡಿ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿತು. ಸಿ ಮತ್ತು ಡಿ ಜಾಗದ ಸಮಸ್ಯೆಯಿಂದ ರೈತರಿಗೆ ಉಂಟಾಗಿರುವ ಅನಾನುಕೂಲಗಳ ಬಗ್ಗೆ ಸಭೆಯಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ ಎಂ ಲೋಕೇಶ್, ಈ ವಿಚಾರದ ಬಗ್ಗೆ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆತಂಕವನ್ನು ದೂರ ಮಾಡುವಂತೆ ಉಸ್ತುವಾರಿ ಸಚಿವರು ಹಾಗೂ ಶಾಸಕದ್ವಯರಿಗೆ ರೈತರ ಪರವಾಗಿ ಮನವಿ ಮಾಡಿದರು.

ಈ ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು ಸಿ ಮತ್ತು ಡಿ ಜಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಮಿಟಿ ರಚನೆ ಮಾಡಲಾಗುವುದು. ಮಂಗಳವಾರ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಮುಖಂಡರುಗಳೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದೆಂದರು. 

ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ ಸೋಮವಾರ ಸದನದಲ್ಲಿ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದೆಂದರು. ಈ ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ,ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಕೆ ಪಿ ಚಂದ್ರಕಲಾ, ಸೋಮವಾರಪೇಟೆ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶ್ರೀ ಜೆ ಎಲ್ ಜನಾರ್ದನ್, ಕಾಂಗ್ರೆಸ್ ಮುಖಂಡರಾದ ಶ್ರೀ ಟಿ ಪಿ ರಮೇಶ್, ಶ್ರೀ ಕೊಲ್ಯದ ಗಿರೀಶ್, ಶ್ರೀ ನಟೇಶ್ ಗೌಡ, ಶ್ರೀ ಖಾಲಿದ್, ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀ ಮೋಹನ್ ರವರು ಉಪಸ್ಥಿತರಿದ್ದರು.