ಕೊಡಗು ಗೌಡ ಸಮಾಜ ಮುಖಂಡರಿಂದ ಎ ಎಸ್ ಪೊನ್ನಣ್ಣ ಅವರಿಗೆ ಅಭಿನಂದನೆ

ಕೊಡಗು ಗೌಡ ಸಮಾಜ ಮುಖಂಡರಿಂದ ಎ ಎಸ್ ಪೊನ್ನಣ್ಣ ಅವರಿಗೆ ಅಭಿನಂದನೆ

ಬೆಂಗಳೂರು: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಅವರ ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದರು. ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಇತ್ತೀಚಿಗೆ ನೀಡಿದ ಭರವಸೆಯಂತೆ ಶಾಸಕರು ಒಂದು ಕೋಟಿ ಅನುದಾನ ಮಂಜೂರು ಭರವಸೆ ನೀಡಿರುವುದಕ್ಕೆ ಶಾಸಕರಿಗೆ ಧನ್ಯವಾದಗಳು ಅರ್ಪಿಸಿದರು.

ಬಳಿಕ ಮಾತನಾಡಿದ ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣರವರು, ಈ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ, ಗೌಡ ಸಮಾಜಕ್ಕೆ ₹ 75 ಲಕ್ಷ ಗಳನ್ನು ನೀಡಿದ್ದರು. ಇಲ್ಲಿಯ ತನಕ ನಮ್ಮ ಅರೆಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆಯ ಗೌಡ ಜನಾಂಗಕ್ಕೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೆ ನಂಬರ್ 98/1 ರ ಪೈಸಾರಿ ಜಾಗದಲ್ಲಿ ಖಾಲಿ ಇರುವ 13 ಎಕರೆ ಜಾಗವನ್ನು, ಕೊಡಗು ಗೌಡ ಸಮಾಜ - ಮಡಿಕೇರಿ, ಇವರಿಗೆ ಮಂಜೂರು ಮಾಡಲು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಾಜದ ಪ್ರಮುಖರ ಈ ಬೇಡಿಕೆಯನ್ನು ಸಚಿವ ಸಂಪುಟದ ಮುಂದಿಟ್ಟು, ಮುಂದಿನ ದಿನಗಳಲ್ಲಿ ಮಂಜೂರು ಮಾಡುವ ಭರವಸೆ ನೀಡಿದರು.ಶಾಸಕರಿಗೆ, ಸಮಾಜದ ಇನ್ನಿತರ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಶಾಸಕರು, ಸಮಾಜದ ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. 

ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಗೌಡ ಸಮಾಜದ ಪ್ರಮುಖರಾದ ಸೋಮಣ್ಣ, ಗಿರೀಶ್, ಬಿಎಸ್ ಆನಂದ್, ರಾಜೇಂದ್ರ, ಅನಂತ್ ಕುಮಾರ್, ವಸಂತ, ಸಂದೀಪ್, ಸೀತಾರಾಮ್, ಶ್ರೀಮತಿ ದಮಯಂತಿ ಮುಂತಾದ ಮುಖಂಡರು ಉಪಸ್ಥಿತರಿದ್ದರು.