ಕುಶಾಲನಗರ : ದಿ.ಆರ್.ಗುಂಡೂರಾವ್ ಪ್ರತಿಮೆ ನಿರ್ಮಾಣ ಕುರಿತ ಮುಖಂಡರ ಸಭೆ

ಕುಶಾಲನಗರ : ದಿ.ಆರ್.ಗುಂಡೂರಾವ್ ಪ್ರತಿಮೆ ನಿರ್ಮಾಣ ಕುರಿತ ಮುಖಂಡರ ಸಭೆ

ಕುಶಾಲನಗರ : ಈ ಹಿಂದೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದರೂ ಕೂಡ ಇಂದಿನ ಸಭೆಯಲ್ಲಿ ಈ ವಿಷಯ ಪ್ರಸ್ತಾವನೆ ಇಲ್ಲದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೆಲವು ಸಂಘ-ಸಂಸ್ಥೆಗಳ ಮುಖಂಡರು ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಪಟ್ಟಣದ ಪುರಸಭೆ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಪ್ರತಿಮೆ ಸ್ಥಾಪನೆ ಹಾಗೂ ವಿವಿದ ರಸ್ತೆಗಳಿಗೆ ನಾಮಕರಣ ಮಾಡುವ ಉದ್ದೇಶದಿಂದ ಪುರಸಭೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಂಘಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ವಿಚಾರ ಕೈಬಿಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಬಿ.ರಾಜು ಹಾಗೂ ಪ್ರಮುಖರು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಕುಶಾಲನಗರ ಐ.ಬಿ. ರಸ್ತೆಯ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಇಂದಿನ‌ ಸಭೆಯ ಇತರ ವಿಚಾರಗಳ ಜೊತೆಯಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ವಿಚಾರ ಇತ್ಯರ್ಥಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ. ಜೈವರ್ಧನ್, ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ನ ಲೋಕೇಶ್, ಡಿಎಸ್ಎಸ್ ನ ಕೆ.ಬಿ.ರಾಜು, ಅಂಬೇಡ್ಕರ್ ಜನಪರ ವೇದಿಕೆಯ ಜಯಪ್ರಕಾಶ್ ಮತ್ತಿತರರು ಪಟ್ಟು ಹಿಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಿರೀಶ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ಸಂಬಂಧ ಶಾಸಕರ ಸಮ್ಮುಖದಲ್ಲಿ ಪ್ರತ್ಯೇಕ ಸಭೆ ಹಮ್ಮಿಕೊಳ್ಳುವ ಉದ್ದೇಶ ಹೊಂದಿರುವುದಾಗಿ ಹೇಳಿ ದಲಿತ ಮುಖಂಡರನ್ನು ಸಮಾಧಾಯಪಡಿಸಿದರು.

ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರ ವೃತ್ತ‌ ನಿರ್ಮಾಣಕ್ಕೆ ಶಾಸಕರು ಈಗಾಗಲೇ ಖುದ್ದು ಭೂಮಿಪೂಜೆ ನೆರವೇರಿಸಿದ್ದಾರೆ.ಆದರೆ ಮತ್ತೆ ಹೊಸದಾಗಿ ಈ ವಿಚಾರ ಕೈಗೆತ್ತಿಕೊಂಡಿರುವ ಕ್ರಮ ಸರಿಯಲ್ಲ ಎಂದು ಮುಖಂಡರಾದ ಶಿವಶಂಕರ್, ಪ್ರಕಾಶ್, ನಂಜುಂಡಸ್ವಾಮಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.

 ಕುಶಾಲನಗರ ಸುಪುತ್ರ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ರವರ ಪ್ರತಿಮೆಯನ್ನು ಪುರಸಭೆಯ ಆವರಣದಲ್ಲಿ ಸ್ಥಾಪಿಸುವುದು, ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ದಿ.ಬಾಬು ಜಗಜೀವನರಾಂ ರವರ ಹೆಸರನ್ನು ಟಾಟಾ ಪೆಟ್ರೋಲ್ ಬಂಕ್ ಎದುರು ಇರುವ ವೃತ್ತಕ್ಕೆ ನಾಮಕರಣ ಮಾಡುವುದು, ತ್ರಿಭಾಷಾ ಜ್ಞಾನಿ, ಕವಿ, ಪಟ್ಟಣದ ಬೈಚನಹಳ್ಳಿಯಲ್ಲಿ ನೆಲೆಸಿದ್ದ ನಿವೃತ್ತ ಪ್ರಾಂಶುಪಾಲ ದಿ.ವಿ.ಎಸ್.ರಾಮಕೃಷ್ಣ ರವರ ಹೆಸರನ್ನು ಕಲಾಭವನಕ್ಕೆ ಹೋಗುವ ರಸ್ತೆಗೆ ನಾಮಕರಣ ಮಾಡಲು ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಲಹೆಗಳನ್ನು ಸ್ವೀಕರಿಸಲಾಯಿತು.

ಈ ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಸೇರಿದಂತೆ ಪುರಸಭೆ ಅಧಿಕಾರಿಗಳು, ಮಾಜಿ ಜನ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

 ಕುಶಾಲನಗರ ಪುರಸಭೆ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಪ್ರತಿಮೆ ಸ್ಥಾಪನೆ ಹಾಗೂ ವಿವಿದ ರಸ್ತೆಗಳಿಗೆ ನಾಮಕರಣ ಮಾಡುವ ಉದ್ದೇಶದಿಂದ ಮುಖ್ಯಾಧಿಕಾರಿ ಗಿರೀಶ್ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ಬುಧವಾರ ಸಂಘಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು.