ಕುಶಾಲನಗರ : ಕೊಡಗು ಜಿಲ್ಲಾ ‌ ಪಜಾ-ಪಪ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ

ಕುಶಾಲನಗರ : ಕೊಡಗು ಜಿಲ್ಲಾ ‌ ಪಜಾ-ಪಪ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ

ಕುಶಾಲನಗರ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೃತ್ತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಕೊಡಗು ಜಿಲ್ಲಾ ‌ ಪಜಾ,ಪಪ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಆಗ್ರಹಿಸಿದರು.

ಪಟ್ಟಣದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ನಿವೃತ್ತ ಸರ್ಕಾರಿ ನೌಕರರ ಸಂಘದ 2026- 27ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಸ್ಥಾಪನೆಯಾಗಿ 12 ವರ್ಷಗಳಾಗಿದ್ದು, ಸಂಘ ಸಕ್ರಿಯವಾಗಿ ಕೆಲಸ ಮಾಡಿದರೆ ಪ್ರಬುದ್ಧವಾಗಿ ಬೆಳೆವಣಿಗೆ ಹೊಂದುತ್ತದೆ. ಸಂಘವು ಹಲವಾರು ರಚನಾತ್ಮಕ ಚಟುವಟಕೆಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿದೆ. ಎಲ್ಲಾ ಸದಸ್ಯರು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಕಚೇರಿ ಅವಶ್ಯಕತೆ ಇದ್ದು,ಇದಕ್ಕಾಗಿ ಜಾಗ ಮಂಜೂರಾತಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ ಎಂದರು.

ನಿವೃತ್ತ ನೌಕರರ ಹಿತರಕ್ಷಣೆಗಾಗಿ ಸಂಘವು ಸದಾ ಸಿದ್ದ ಎಂದು ಸಿದ್ದಪ್ಪ ಭರವಸೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸದಸ್ಯ ನಿವೃತ್ತ ಎಎಸ್ಐ ಮರಿಯಪ್ಪ ಮಾತನಾಡಿ,ಸಂಘದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಸಂಘದ ಸ್ಥಾಪಕ ಸದಸ್ಯ ನಿವೃತ್ತ ಪೊಲೀಸ್ ಅಧಿಕಾರಿ ಎ.ಎಸ್. ಜೋಯಪ್ಪ ಸಂಘದ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಬಿ.ಸಿ.ರಾಜುಸಭೆಯಲ್ಲಿ 2025-26ನೇ ಸಾಲಿನ ಮಹಾಸಭೆ ನಡವಳಿ ಮಂಡಿಸಿ ಅನುಮೋದನೆ ಪಡೆದರು.ನಂತರ 2026-27ನೇ ಸಾಲಿನ ಮುಂಗಡ ಕ್ರಿಯಾಯೋಜನೆಗೆ ಅನುಮೋದನೆ ಪಡೆದರು. ಸದಸ್ಯರಿಗೆ ಗುಂಪು ವಿಮೆ ಹಾಗೂ ವೈಯಕ್ತಿಕ ಅಪಘಾತ ವಿಮೆ ಮಾಡಿಸುವ ಕುರಿತು ಚರ್ಚೆ ನಡೆಯಿತು.

ಸಂಘದ ಕಚೇರಿಯಲ್ಲಿ ಗ್ರಂಥಾಲಯ ಸ್ಥಾಪನೆ ಹಾಗೂ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ತೀರ್ಮಾನಿಸಲಾಯಿತು. ಸಂಘ ಬೆಳವಣಿಗೆ ಸದಸ್ಯರು ಸಹಕಾರ ನೀಡುವಂತೆ ತೀರ್ಮಾನಿಸಲಾಯಿತು.ಬುದ್ಧ ವಂದನೆ, ಸಂವಿಧಾನ ಪೀಠಿಕ ವಾಚಿಸಲಾಯಿತು.

ನಿಧನರಾದ‌ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಹಿರಿಯ ಸದಸ್ಯರಾದ ಮರಿಯಪ್ಪ ಹಾಗೂ ಪಟ್ಟಯ್ಯ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ರಾಮಚಂದ್ರಮೂರ್ತಿ ಸ್ವಾಗತಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಎಂ. ಡಿ ಅಪ್ಪಾಜಿ ವಂದಿಸಿದರು.