ಕುಶಾಲನಗರ: ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ 50 ಲಕ್ಷ ವೆಚ್ಚದ ಬಯಲು ರಂಗಮಂದಿರ, ಸಮುದಾಯ ಭವನಕ್ಕೆ ಭೂಮಿಪೂಜೆ

ಕುಶಾಲನಗರ: ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ 50 ಲಕ್ಷ ವೆಚ್ಚದ ಬಯಲು ರಂಗಮಂದಿರ, ಸಮುದಾಯ ಭವನಕ್ಕೆ ಭೂಮಿಪೂಜೆ

ಕುಶಾಲನಗರ: ನಗರದ ಬೈಚನಳ್ಳಿ ಸಮೀಪ ಕಾವೇರಿ ನದಿ ದಡದಲ್ಲಿ ನೆಲೆಸಿರುವ ಶ್ರೀ ಮುತ್ತಪ್ಪ ದೇವಾಲಯದ ಮುಂಭಾಗದ ನಿವೇಶನದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾಟ್ರಸ್ಟ್ ವತಿಯಿಂದ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಯಲು ರಂಗಮಂದಿರ ಹಾಗೂ ಸಮುದಾಯ ಭವನಕ್ಕೆ ಭಾನುವಾರ ಭೂಮಿಪೂಜೆ ನೆರವೇರಿತು.

ಪ್ರಥಮ ಹಂತದ ಕಾಮಗಾರಿಗೆ ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರ ಸಂಸದರ ನಿಧಿಯಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ಅನುದಾನದ ಪ್ರಥಮ ಹಂತದ ಕಾಮಗಾರಿಯ ಭೂಮಿಪೂಜೆಯನ್ನು ಸೇವಾಟ್ರಸ್ಟ್ ಅಧ್ಯಕ್ಷ ಕೆ. ವರದ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಕೆ. ವರದ, ಶ್ರೀ ಮುತ್ತಪ್ಪ ದೇವಾಲಯದ ಮುಂಭಾಗದ ನಿವೇಶನವನ್ನು ದೇವಾಲಯ ಸಮಿತಿ ಸದಸ್ಯರು ಹಾಗೂ ಊರಿನ ದಾನಿಗಳ ನೆರವಿನಿಂದ ಖರೀದಿಸಲಾಗಿದೆ. ಇಲ್ಲಿ ಸೇವಾಟ್ರಸ್ಟ್ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಬಯಲು ರಂಗಮಂದಿರ ಹಾಗೂ ಸಮುದಾಯ ಭವನ ನಿರ್ಮಿಸಲು ಸಿದ್ಧತೆ ನಡೆದಿದೆ. ಪ್ರಥಮ ಹಂತದಲ್ಲಿ ಸಂಸದರು 5 ಲಕ್ಷ ರೂ. ಅನುದಾನ ನೀಡಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ನಿಧಿಯಿಂದ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಉಳಿದ ಕಾಮಗಾರಿಗೆ ಹಣವನ್ನು ದೇವಾಲಯದ ಸದಸ್ಯರು ಹಾಗೂ ಊರಿನ ದಾನಿಗಳಿಂದ ಸಂಗ್ರಹಿಸಿ ಶೀಘ್ರವಾಗಿ ಕಟ್ಟಡ ಪೂರ್ಣಗೊಳಿಸಲಾಗುವುದು. ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಕುಟುಂಬಗಳು ನಡೆಸುವ ಶುಭಕಾರ್ಯಗಳು, ಮದುವೆ ಮುಂತಾದ ಸಮಾರಂಭಗಳಿಗೆ ಕಡಿಮೆ ವೆಚ್ಚದಲ್ಲಿ ರಂಗಮಂದಿರ, ಸಮುದಾಯ ಭವನ ಲಭ್ಯವಾಗಲಿದೆ. ಇದರಿಂದ ಕಾರ್ಯಕ್ರಮ ನಡೆಸುವ ಜನರಿಗೆ ಅನುಕೂಲವಾಗುವುದರ ಜೊತೆಗೆ ಬರುವ ಆದಾಯದಿಂದ ಶ್ರೀ ಮುತ್ತಪ್ಪ ದೇವಾಲಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಬೋಬಿ, ಸದಸ್ಯ ಹರೀಂದ್ರನ್, ಆಡಳಿತ ಮಂಡಳಿ ಅಧ್ಯಕ್ಷ ರಂಜೀತ್ ಕುಮಾರ್, ಸಂಚಾಲಕ ಎಂ.ಎಸ್. ಮಣಿಕಂಠ, ಉಪಾಧ್ಯಕ್ಷ ವಿಮಲ್ ನಾಯರ್, ಕಾರ್ಯದರ್ಶಿ ವಿನು ಕಮಲ್, ಸಹ ಕಾರ್ಯದರ್ಶಿ ಸಂದೀಪ್, ಸದಸ್ಯರಾದ ಎಂ.ಕೆ. ರವಿ, ವಿನೋದ್ ಕುಮಾರ್, ಜಿತೇಶ್, ರಾಕೇಶ್, ದೇವಾಲಯದ ಅರ್ಚಕ ರಾಜೀವ್ ಮಡೆಯನ್ ಹಾಗೂ ಭಕ್ತರು ಇದ್ದರು.

ವರದಿ: ಟಿ.ಆರ್. ಪ್ರಭುದೇವ್, ಕುಶಾಲನಗರ