ಕುಶಾಲನಗರ; ಮನೆಗೆ ನುಗ್ಗಿ ನಗದು-ಆಭರಣ ಕಳ್ಳತನ

May 25, 2026 - 22:47
 0  1.3k
ಕುಶಾಲನಗರ; ಮನೆಗೆ ನುಗ್ಗಿ ನಗದು-ಆಭರಣ ಕಳ್ಳತನ

ಮಡಿಕೇರಿ: ಕುಶಾಲನಗರ ಪಟ್ಟಣದ ಬಡಾವಣೆಯೊಂದರಲ್ಲಿ ಮನೆಯ ಬಾಗಿಲು ಮರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ರೂ. 8,000 ನಗದು ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು 1.3 ಲಕ್ಷ ಮೌಲ್ಯದ ಸ್ವತ್ತುಗಳು ಕಳ್ಳತನವಾಗಿವೆ. ಪಟ್ಟಣದ ಆದಿ ಶಂಕರಾಚಾರ್ಯ ಬಡಾವಣೆಯಲ್ಲಿ ನೆಲೆಸಿರುವ ಶಿಕ್ಷಕ ವೆಂಕಟೇಶ್ ಎಂಬವರು ಮನೆಯಲ್ಲಿ ಇಲ್ಲದ ಸಂದರ್ಭ ಈ ಘಟನೆ ನಡೆದಿದೆ.

 ತಾ. 21 ರಂದು ವೆಂಕಟೇಶ್ ಕುಟುಂಬ ಪ್ರವಾಸಕ್ಕೆ ತೆರಳಿದ್ದು, ಈ ಸಂದರ್ಭ ಕಳ್ಳತನ ನಡೆದಿದೆ. ಮನೆಯಲ್ಲಿ ಇದ್ದ ಸುಮಾರು ಒಂದು ಕೆಜಿಯಷ್ಟು ಬೆಳ್ಳಿ ಆಭರಣಗಳು ಅದೃಷ್ಟವಶಾತ್ ಕಳುವಾಗದೆ ಉಳಿದಿದೆ. ವೆಂಕಟೇಶ್ ಅವರು ಭಾನುವಾರ ಬೆಳಿಗ್ಗೆ ಮನೆಗೆ ಬಂದ ಸಂದರ್ಭಮನೆಯ ಹಿಂದಿನ ಬಾಗಿಲು ಮುರಿದು ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಬಗ್ಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಕುಶಾಲನಗರ ಡಿವೈಎಸ್‌ಪಿ ಚಂದ್ರಶೇಖ‌ರ್, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಯಾವುದೇ ವ್ಯಕ್ತಿಗಳು ಮನೆಗೆ ಬೀಗ ಹಾಕಿ ತೆರಳುವ ಸಂದರ್ಭ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಇಲಾಖೆಗೆ ಸಹಕಾರಿಯಾಗುತ್ತದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾ‌ರ್ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0