ಕುಶಾಲನಗರ:ಅಪ್ರಾಪ್ತ ಮಗನನ್ನೇ ಬಲವಂತದ ಮತಾಂತರ ಆರೋಪ,ತಾಯಿ ಅರೆಸ್ಟ್
ಕುಶಾಲನಗರ, ಜೂ. 25: ತನ್ನ ಸ್ವಂತ ಮಗನನ್ನೇ ಬಲವಂತವಾಗಿ ಮತಾಂತರ ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಕುಶಾಲನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯ ಪತಿ ರಾಜೀವ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೇರಳದಿಂದ ಆರೋಪಿ ಸಜಿತ ಎಂಬವರನ್ನು ಕರೆತಂದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮೊಹಮ್ಮದ್ ಸಲೀಂ ಹಾಗೂ ಜಲೀಲ್ ಎಂಬುವರನ್ನು ಈ ಹಿಂದೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ತನಿಖಾಧಿಕಾರಿ, ಕುಶಾಲನಗರ ಟೌನ್ ಠಾಣಾಧಿಕಾರಿ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಇತರೆ ಆರೋಪಿಗಳ ಪತ್ತೆಗಾಗಿ ಪೊಲೀಸ್ ತಂಡ ಕೇರಳಕ್ಕೆ ತೆರಳಲು ಸಿದ್ಧತೆ ನಡೆಸಿದೆ.
ಘಟನೆಗೆ ಸಂಬಂಧಿಸಿದಂತೆ ಜೂ. 30ರಂದು ಹಿಂದೂಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯದ ಸಂಘಟನೆಗಳು ಜನಜಾಗೃತಿ ಮತ್ತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಇದೇ ವೇಳೆ, ಆರೋಪಿ ಮೊಹಮ್ಮದ್ ಸಲೀಂ ಅವರು ಕಾವೇರಿ ನಿಸರ್ಗಧಾಮ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ನಡೆಸುತ್ತಿದ್ದು, ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೂ. 14ರಿಂದ ಅಂಗಡಿಯನ್ನು ತೆರವುಗೊಳಿಸಿ ಬಾಡಿಗೆ ಒಪ್ಪಂದ ರದ್ದುಪಡಿಸಲಾಗಿದೆ ಎಂದು ಕಟ್ಟಡ ಮಾಲೀಕ ಅಬ್ದುಲ್ ಸಲಾಂ ರಾವುತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

