ಕುಶಾಲನಗರ : ನಿವೃತ್ತ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯಗೆ ನಾಗರಿಕ ಸನ್ಮಾನ

ಕುಶಾಲನಗರ : ನಿವೃತ್ತ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯಗೆ ನಾಗರಿಕ ಸನ್ಮಾನ

ಕುಶಾಲನಗರ : ಸರ್ಕಾರಿ ಹಿರಿಯ ಅಧಿಕಾರಿಗಳ ಪ್ರಾಮಾಣಿಕತೆ,ಕಾರ್ಯಕ್ಷಮತೆ, ದಕ್ಷತೆ ಮತ್ತು ನೈತಿಕತೆ ಇತರರಿಗೆ ಮಾದರಿಯಾಗಬೇಕು‌ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಇಲ್ಲಿನ ಕಲಾ ಮಂದಿರದಲ್ಲಿ ನಿವೃತ್ತ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರಿಗೆ ಈಚೆಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಹಾಗೂ ನಾಗರಿಕ ಸನ್ಮಾನ ಕಾರ್ಯಕ್ರಮ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೇ ಅಧಿಕಾರಿಗಳು ಸರ್ಕಾರಿ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವಲ್ಲಿ ನಿಷ್ಠೆ ತೋರಿಸಬೇಕು.ಯಾವುದೇ ಕಾರಣಕ್ಕೂ, ನಿರ್ಲಕ್ಷ್ಯ ತೋರಬಾರದು ಎಂದರು.

ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ನೊಂದಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಮಾನಸದಲ್ಲಿ ಉತ್ತಮ ಅಧಿಕಾರಿ ಎಂಬ ಮೆಚ್ಚುಗೆ ಗಳಿಸಿದ್ದಾರೆ ಎಂದರು.

ಪ್ರಾಮಾಣಿಕ ಅಧಿಕಾರಿಗಳನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅವರು ಸಮಾಜದ ಬೆನ್ನೆಲುಬು. ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಗಳಿಂದ ಮಾತ್ರ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ಸಮಾಜ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಸಾಧ್ಯ ಎಂದ ಅವರು ಕಿರಣ್ ಗೌರಯ್ಯ ಅವರಿಗೆ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ,ನಿಷ್ಠಾವಂತ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಗೌರವಿಸುವುದರಿಂದ ಅವರ ಕಾರ್ಯವೈಖರಿಗೆ ಪ್ರೋತ್ಸಾಹ ಸಿಗುತ್ತದೆ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ ಎಂದರು.

ಕಿರಣ್ ಗೌರಯ್ಯ ಅವರು ಬಡವರ ಪರವಾಗಿ ಕೆಲಸ ಮಾಡುವ ಮೂಲಕ ಪಾರದರ್ಶಕ ಆಡಳಿತ ನೀಡಿರುವುದು ಶ್ಲಾಘನೀಯವಾದುದು ಎಂದರು.

ಸಾಹಿತಿ ಡಾ.ಕೆ.ಸೋಮಣ್ಣ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು.ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವುದರಿಂದ ಸರ್ಕಾರ ಮತ್ತು ನಾಗರಿಕರ ನಡುವೆ ಬಲವಾದ ನಂಬಿಕೆ ಮತ್ತು ವಿಶ್ವಾಸ ಮೂಡುತ್ತದೆ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು, ಜಿಲ್ಲಾ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ನಿರ್ದೇಶಕ ಆನಂದ್ ಕುಮಾರ್,ರೋಟರಿ ಸಂಸ್ಥೆ ಅಧ್ಯಕ್ಷ ಮನುಪೆಮ್ಮಯ್ಯ, ಹಿರಿಯ ರೋಟರಿ ಸದಸ್ಯ ಎಸ್.ಕೆ.ಸತೀಶ್,ಡಯಟ್ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪಾ,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾವೇರಿ ಆಂದೋಲನದ ಚಂದ್ರಮೋಹನ್, ಮುಖಂಡರಾದ ಎಂ.ವಿ.ನಾರಾಯಣ್, ನವೀನ್ ಕುಮಾರ್ ಚಂದನ್ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭನಿವೃತ್ತ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.