ಕುಶಾಲನಗರ: ಇಂದಿರಾ ಬಡಾವಣೆಯಲ್ಲಿ ಅದ್ಧೂರಿ ಗೌರಿ-ಗಣೇಶೋತ್ಸವ ಕಾರ್ಯಕ್ರಮ

ಕುಶಾಲನಗರ: ಇಂದಿರಾ ಬಡಾವಣೆಯಲ್ಲಿ ಅದ್ಧೂರಿ ಗೌರಿ-ಗಣೇಶೋತ್ಸವ ಕಾರ್ಯಕ್ರಮ

ಕುಶಾಲನಗರ:ಇಂದಿರಾ ಬಡಾವಣೆಯ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ 23 ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಕಿರಿಯರು-ಹಿರಿಯರು ಎನ್ನದೆ ಜಾತಿ ಭೇದ ಮರೆತು ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು. 2 ನೇ ದಿನವಾದ ಗುರುವಾರ ಸ್ಥಳೀಯ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಂಗೀತ ಕುರ್ಚಿ,ಪಾಸಿಂಗ್ ದ ಬಾಲ್, ಲೆಮೆನ್ ವಿತ್ ಸ್ಪೂನ್, ಕೆರೆ-ದಡ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಡಾವಣೆಯ ನಿವಾಸಿಗಳು ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಆಡಿ ನಲಿದರು. ವಿದ್ಯುತ್ ದೀಪಾಲಂಕಾರ ಸೇರಿದಂತೆ ಭಕ್ತರ ಗಮನ ಸೆಳಯುವಂತೆ ಹಲವು ಹೂಗಳಿಂದ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪುಷ್ಪಮಂಟಪೋತ್ಸವವನ್ನು ಅದ್ಧೂರಿಯಾಗಿ ಸಿಂಗರಿಸಲಾಗಿತ್ತು. ಬಡಾವಣೆಯ ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪೂಜೆಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಗಣೇಶೋತ್ಸವದ ಅಂಗವಾಗಿ ಸ್ಥಳೀಯ ಶರಣ್ ಸಾರಥ್ಯದ ಡ್ರೀಮ್ ಸ್ಟಾರ್ ನೃತ್ಯ ಸಂಸ್ಥೆ, ಹಾಗೂ ನಿಶಿ ಸಾರಥ್ಯದ ಡಿ.ಸಿ. ಡ್ಯಾನ್ಸ್ ಸ್ಟುಡಿಯೋ ವತಿಯಿಂದ ನಡೆದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ನೆರೆದಿದ್ದವರ ಗಮನ ಸೆಳೆಯಿತು.

 ಈ ವೇಳೆ ಮಾತನಾಡಿದ ಗೋಲ್ಡನ್ ಗೆಳೆಯರ ಬಳಗದ ಅಧ್ಯಕ್ಷ ಭಕ್ತರಾಜು, ಗಣಪತಿ ಕಾರ್ಯಕ್ರಮಗಳು ಮೋಜು ಮಸ್ತಿ ಮಾಡುವ ಕಾರ್ಯಕ್ರಮಗಳಲ್ಲ. ಈ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಸಮಾಜದ ಜನರನ್ನು ಒಂದೆಡೆ ಬೆರೆಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ. ಜಾತಿ ಭೇದಗಳನ್ನು ಮರೆತು ಎಲ್ಲರೂ ಒಂದಾಗಿ ಈ ಕಾರ್ಯಕ್ರಮವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು. ಭಕ್ತರು ಜ್ಞಾನ, ಸಮೃದ್ಧಿ ಮತ್ತು ಯಶಸ್ಸಿನ ಆಶೀರ್ವಾದವನ್ನು ಪಡೆಯಲು ಗಣೇಶನನ್ನು ಪೂಜಿಸುತ್ತಾರೆ. ಯಾವುದೇ ಹೊಸ ಉದ್ಯಮಕ್ಕೂ ಮೊದಲು ಗಣೇಶನನ್ನು ಆರಾಧಿಸಲಾಗುತ್ತದೆ, ಈ ಹಬ್ಬವು ಅಡೆತಡೆಗಳನ್ನು ತೆಗೆದುಹಾಕಿ ಶುಭ ಆರಂಭಗಳನ್ನು ಆಹ್ವಾನಿಸುವ ಸಮಯವಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸ, ವಾತ್ಸಲ್ಯದಿಂದ ಬೆರೆತು ಬಾಳಲು ಬಡಾವಣೆಯಲ್ಲಿ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ ಎಂದರು. ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ನಡೆಸಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

 ಈ ಸಂದರ್ಭ ಗೋಲ್ಡನ್ ಗೆಳೆಯರ ಬಳಗದ ಉಪಾಧ್ಯಕ್ಷ ರಿಯಾಜ್, ಕಾರ್ಯದರ್ಶಿ ಆದಂ, ಖಜಾಂಚಿ ಶರಣ್, ಪ್ರಮುಖರಾದ ಜಗದೀಶ್ ಕುಮಾರ್, ಗಿರೀಶ್,ಯತೀಶ, ಪೂರ್ಣಚಂದ್ರ, , ಮನು, ,ಸಮೀವುಲ್ಲಾ, , ಕುಮಾರ್, ರಿತಿನ್,ಧನು, ಮಂಜು, ಸೇರಿದಂತೆ ಮತ್ತಿತರರು ಹಾಜರಿದ್ದರು.