ಭೂಕಂದಾಯ ತಿದ್ದುಪಡಿ ಮಸೂದೆ ಅಂಗೀಕಾರ:ದೀರ್ಘಕಾಲದ ಜಮ್ಮಾ ಹಿಡುವಳಿದಾರರ ಸಮಸ್ಯೆ ಗೆ ಪರಿಹಾರ: ಹುದಿಕೇರಿ ಸಮಾನ ಮನಸ್ಕರ ಬಳಗದ ಪ್ರಮುಖರ ವಿಶ್ವಾಸ

ಭೂಕಂದಾಯ ತಿದ್ದುಪಡಿ ಮಸೂದೆ ಅಂಗೀಕಾರ:ದೀರ್ಘಕಾಲದ ಜಮ್ಮಾ ಹಿಡುವಳಿದಾರರ ಸಮಸ್ಯೆ ಗೆ ಪರಿಹಾರ:  ಹುದಿಕೇರಿ ಸಮಾನ ಮನಸ್ಕರ ಬಳಗದ ಪ್ರಮುಖರ ವಿಶ್ವಾಸ

ಪೊನ್ನಂಪೇಟೆ:ಕೊಡಗಿನಲ್ಲಿ ಜಮ್ಮಾ ಹಿಡುವಳಿದಾರರಲ್ಲಿ ಪಟ್ಟೆದಾರ ಹಾಗೂ ಪೌತಿ ಖಾತೆ ಸಮಸ್ಯೆಯನ್ನು ಬಗೆಹರಿಸಲು ಬೆಳಗಾವಿ ಅಧಿವೇಶನದಲ್ಲಿ ಹೊಸ ಭೂಕಂದಾಯ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಅಂಗೀಕಾರ ದೊರೆತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಜಮ್ಮಾ ಹಿಡುವಳಿದಾರರು ಅನುಭವಿಸುತ್ತಿದ್ದ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಹುದಿಕೇರಿ ಸಮಾನ ಮನಸ್ಕರ ಬಳಗ ಮಂಡನೆಯಾಗಿರುವ ಮಸೂದೆಯನ್ನು ಸ್ವಾಗತಿಸಿದ್ದಾರೆ.

ಹುದಿಕೇರಿಯಲ್ಲಿ ಬಳಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಚೆಕ್ಕೇರ ಸಿ. ಮಾದಯ್ಯ ಅವರು ಮಸೂದೆ ಮಂಡನೆ ಮಾಡಲು ಕಾರಣಕರ್ತರಾದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಈ ನಿಟ್ಟಿನಲ್ಲಿ ವಿಶೇಷ ಅಧ್ಯಯನ ನಡೆಸಿದ ವಿರಾಜಪೇಟೆ ಕ್ಷೇತ್ರ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಪ್ರಯತ್ನವನ್ನು ಶ್ಲಾಘಿಸಿ, ಈ ನಿಟ್ಟಿ ಮಸೂದೆ ಮಂಡನೆಗೆ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದ ಮುಖಂಡರು ಬೆಂಬಲ ನೀಡಿದ ಎಲ್ಲರ ಕಾಳಜಿಯನ್ನು ಸ್ಮರಿಸುವುದಾಗಿ ಅಭಿಪ್ರಾಯ ಪಟ್ಟರು.

 ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಮಸೂದೆಯನ್ನು ಗ್ರಾಮ ಮಟ್ಟದಲ್ಲಿ ಜಾರಿ ಮಾಡಲು ಜಿಲ್ಲಾಧಿಕಾರಿಗಳು ಅದಾಲತ್ ನಡೆಸಬೇಕೆಂದು ಹುದಿಕೇರಿ ಸಮಾನ ಮನಸ್ಕರ ಬಳಗ ಪ್ರಮುಖರು ಸಲಹೆ ನೀಡುವುದಾಗಿ ಅವರು ತಿಳಿಸಿದರು.

 ಬೆಳಗಾವಿ ಅಧಿವೇಶನದಲ್ಲಿ ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ಉಂಟಾಗುತ್ತಿದ್ದ ವಿವಿಧ ಸಮಸ್ಯೆಯನ್ನು ಬಗೆಹರಿಸಲು ಈ ಮಸೂದೆಯಿಂದ ಅನುಕೂಲವಾಗಲಿದೆ ಈ ಮಸೂದೆಯನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತಂದು ಜನರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಾಲೂಕು ತಹಸಿಲ್ದಾರ್ ಕಚೇರಿ, ಹೋಬಳಿ ಮಟ್ಟದ ಕಂದಾಯ ಪರಿವೀಕ್ಷಕರ ಕಚೇರಿಗಳಲ್ಲಿ ಮಾರ್ಗಸೂಚಿಯನ್ನು ಹೊರಡಿಸಬೇಕು ಹಾಗೂ ಹೋಬಳಿ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಜನ ಸಂಪರ್ಕ ಸಭೆ ನಡೆಸುವಂತೆ ಅವರು ಮನವಿ ಮಾಡಿದರು. ಈ ಹಿಂದಿನಿಂದಲೂ ಜಮ್ಮಾ ಹಿಡುವಳಿದಾರರ ಈ ಸಮಸ್ಯೆ ಹಾಗೂ ಮಾಲೀಕತ್ವವನ್ನು ಒದಗಿಸುವ ನಿಟ್ಟಿನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ದಿವಂಗತ ಅಜ್ಜಿಕುಟ್ಟಿರ ಕೆ ಸುಬ್ಬಯ್ಯ ಅವರು ಪ್ರಯತ್ನಿಸಿದ್ದು, ಆದರೆ ಅವರನ್ನು ಈ ನಿಟ್ಟಿನಲ್ಲಿ ನೆನೆಸಿಕೊಳ್ಳುವ ಕಾರ್ಯ ಆಗಬೇಕು ಎ. ಕೆ

 ಸುಬ್ಬಯ್ಯ ಅವರು ಹುದಿಕೇರಿಯ ದಿವಂಗತ ಚೆಕ್ಕೇರ ಪೂವಯ್ಯ ಮತ್ತು ಚೆಕ್ಕೇರ ಸೋಮಯ್ಯ ಮತ್ತು ಬಳಗದಿಂದ ನ್ಯಾಯಾಲಯದಲ್ಲಿ ದಾವೆ ಹೂಡಿ ಕೊಡಗಿನ ಜಮ್ಮಾ ಹಿಡುವಳಿದವರಿಗೆ ಜಾಗದ ಮಾಲೀಕತ್ವವನ್ನು ಒದಗಿಸಿಕೊಟ್ಟಿದ್ದರು. ಇದೊಂದು ಐತಿಹಾಸಿಕ ತೀರ್ಪು ಆಗಿತ್ತು ಎಂದು ಸ್ಮರಣೆ ಮಾಡಿದರು.

 ಇದೀಗ ಕೊಡಗು ಜಿಲ್ಲೆಯ ಜಮ್ಮಾ ಹಿಡುವಳಿದಾರರಿಗೆ ತಮ್ಮ ಜಾಗದ ಮಾಲೀಕತ್ವವನ್ನು ಪಡೆಯಲು ವರ್ಗಾವಣೆ ಮಾಡಲು ಪೌತಿ ಖಾತೆ ಹಾಗೂ ಪಟ್ಟೆದಾರ ವಿಚಾರ ತಾಂತ್ರಿಕವಾಗಿ ಸಮಸ್ಯೆ ಉಂಟಾಗಿತ್ತು ಇದನ್ನು ಬಗೆಹರಿಸಲು ಮಸೂದೆಯನ್ನು ಜಾರಿಗೆ ತಂದು ಅಂಗೀಕರಿಸುವುದು ಅನಿವಾರ್ಯವಾಗಿತ್ತು. ಕೊಡಗಿನ ಜನರ ಈ ಬಹುಕಾಲದ ಸಮಸ್ಯೆಯನ್ನು ಅಧ್ಯಯನ ಮಾಡಿ ವಿಧಾನ ಸಭೆಯಲ್ಲಿ ಮಂಡನೆ ಮಾಡಿ ಅಂಗೀಕಾರ ಪಡೆದಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ ಈ ನಿಟ್ಟಿನಲ್ಲಿ ನಿರಂತರವಾಗಿ ಅಧ್ಯಯನ ಮಾಡಿ ಜಿಲ್ಲೆಯ ಕೊಡವರು ಹಾಗೂ ಇತರ ಮೂಲ ನಿವಾಸಿಗಳು ಸಹ ಹೊಂದಿರುವ ಜಮ್ಮಾಬಾಣೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ವಿರಾಜಪೇಟೆ ಕ್ಷೇತ್ರ ಶಾಸಕ ಎ. ಎಸ್. ಪೊನ್ನಣ್ಣ ನಿರಂತರವಾಗಿ ಶ್ರಮಿಸಿದ್ದು ಅವರ ಪ್ರಯತ್ನ ಶ್ಲಾಘನೀಯ, ಹಾಗೆಯೇ ಅದಕ್ಕೆ ಬೆಂಬಲ ನೀಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಡಿಕೇರಿ ಕ್ಷೇತ್ರ ಶಾಸಕ ಮಂತರ್ ಗೌಡ ಅವರನ್ನು ಬಳಗದ ಪರ ಅಭಿನಂದಿಸುವುದಾಗಿ ಎಂದು ಚೆಕ್ಕೇರ ಮಾದಯ್ಯ ಅವರು ಹೇಳಿದರು.

  ಈ ಸಂದರ್ಭ ಸಮಾನ ಮನಸ್ಕ ಬಳಗದ ಚೆಕ್ಕೇರ ವಾಸು ಕುಟ್ಟಪ್ಪ,ಇಟ್ಟೀರ ಕೆ ಲಾಲಪ್ಪ, ಕಿರಿಯಮಾಡ ದತ್ತ, ಅಜ್ಜಿ ಕುಟ್ಟಿರ ಸುರೇಂದ್ರ, ಮಂಡಂಗಡ ಯೋಗೇಶ್, ಚೆಕ್ಕೇರ ರಂಜಿತ್, ಚೆಕ್ಕೇರ ಸುಧೀರ್ ಮತ್ತು ಇತರರು ಹಾಜರಿದ್ದರು.