ಕಣಿವೆ ಕಟ್ಟೆ ಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಬದುಕು- ಬರಹ" ಕುರಿತ ಉಪನ್ಯಾಸ, ಸಂವಾದ
ಕುಶಾಲನಗರ: ಖ್ಯಾತ ಸಾಹಿತಿ, ಕಾದಂಬರಿಕಾರ, ಪ್ರಯೋಗಶೀಲ ಬರಹಗಾರರಾದ ಪರಿಸರವಾದಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಅವರ ಬರಹಗಳಲ್ಲಿನ ಪ್ರಕೃತಿ ಪ್ರೇಮಕ್ಕಾಗಿ ಅವರನ್ನು ಕನ್ನಡದ "ವರ್ಡ್ಸ್ ವರ್ತ್ " ಎಂದು ಕರೆಯಲಾಗುತ್ತದೆ.
ತೇಜಸ್ವಿಯವರು ತಮ್ಮ ಬಾಲ್ಯದ ದಿನಗಳಲ್ಲಿ ಪಡೆದ ಮಲೆನಾಡಿನ ಅನುಭವಗಳು ಮತ್ತು ಕಥೆಗಳನ್ನು ಕುವೆಂಪು ಅವರಿಂದ ಕೇಳಿದ ತೇಜಸ್ವಿ ಅವರಿಗೆ ಕಾಡೇ ನಾಡಿಗಿಂತ ಹೆಚ್ಚು ಪ್ರಿಯವಾಗಿ,ಕುತೂಹಲಕಾರಿಯಾಗಿ ಹಾಗೂ ಆಸಕ್ತಿದಾಯಕವಾಗಿ ಕಾಣಿಸಿತ್ತು ಎಂದು ಸಾಹಿತಿ, ಸೋಮವಾರಪೇಟೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿಯೂ ಆದ ಸಾಹಿತಿ ಮಿಲನ ಭರತ್ ಹೇಳಿದರು.
ಕುಶಾಲನಗರ ತಾಲ್ಲೂಕಿನ ರಾಮಸ್ವಾಮಿ ಕಣಿವೆಯ ರಾಮಲಿಂಗೇಶ್ವರ ದೇವಸ್ಥಾನದ ಅಂಗಳದ 'ಕಣಿವೆ ಕಟ್ಟೆ'ಯಲ್ಲಿ ಸಮಷ್ಟಿ ಚಿಂತನಾ ಚಾವಡಿ ವತಿಯಿಂದ ಖ್ಯಾತ ಸಾಹಿತಿ, ಪರಿಸರವಾದಿ, ಕಾದಂಬರಿಕಾರ ""ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಬರಹ ಕುರಿತು ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಂವಾದದಲ್ಲಿ ತೇಜಸ್ವಿಯವರ ತೇಜಸ್ವಿಯವರ ಮಲೆನಾಡಿನ ಜೀವನ, ಬರವಣಿಗೆ ಮತ್ತು ಪರಿಸರದ ಒಳನೋಟಗಳ ಕುರಿತು ಮಾತನಾಡಿದರು.
ಕನ್ನಡದ ಖ್ಯಾತ ಬರಹಗಾರ ಮತ್ತು ಕಾದಂಬರಿಕಾರರಾಗಿದ್ದ ಪೂರ್ಣಚಂದ್ರ ತೇಜಸ್ವಿಯವರು ನೇರ ನಡೆ- ನುಡಿ, ನಿಷ್ಠುರವಾದಿಯಾಗಿದ್ದು, ಉತ್ತಮ ಛಾಯಾಗ್ರಾಹಕ, ಪ್ರಕಾಶಕ, ವರ್ಣಚಿತ್ರಕಾರ, ನೈಸರ್ಗಿಕವಾದಿ ಮತ್ತು ಪರಿಸರವಾದಿಯಾಗಿಯೂ ಕೆಲಸ ಮಾಡಿದರು. ಅವರೊಬ್ಬ ಪರಿಸರದ ಅನುಭವಗಳ ಗಣಿಯಾಗಿ ಮಲೆನಾಡಿನ ಹಸಿರು ಪರಿಸರದ ಮಧ್ಯೆ ಅಪರೂಪದ ಸೃಜನಶೀಲ ಹಾಗೂ ಪ್ರಯೋಗಶೀಲ ಚಿಂತಕ ಮತ್ತು ಬರಹಗಾರರಾಗಿ ಕಾಣಸಿಗುತ್ತಾರೆ ಎಂದರು.
ಕನ್ನಡದ ಪ್ರಮುಖ ಲೇಖಕರಾಗಿದ್ದ ತೇಜಸ್ವಿಯವರು ಸ್ವಂತಿಕೆ ಹಾಗೂ ಸರಳತೆಯಲ್ಲಿ ತಮ್ಮ ತಂದೆ ಕುವೆಂಪು ಅವರನ್ನು ಮೀರಿಸಿದವರು. ತಮ್ಮ ಬರವಣಿಗೆಯಲ್ಲಿ ತಲ್ಲೀನರಾಗಿದ್ದ ತೇಜಸ್ವಿಯವರು ಯಾವುದೇ ಪ್ರಚಾರ ಹಾಗೂ ಸ್ಥಾನಮಾನಗಳಿಗೂ ಆಸೆಪಡೆದ ಅಪರೂಪದ ಲೇಖಕರಾಗಿ ಕಾಣ ಸಿಗುತ್ತಾರೆ.
ಈ ಕಾರಣ ಕೂಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಕತೆಗಾರ, ಕಾದಂಬರಿಗಾರ, ಪರಿಸರ ಪ್ರೇಮಿ ಕೃಷಿಕ, ಅಂಕಣಕಾರ ಮತ್ತು ವಿಶಿಷ್ಠ ವ್ಯಕ್ತಿತ್ವದ ಚಿಂತಕ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಮತ್ತು ಬರಹ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಎಂದರು. ತಮ್ಮ ವಿದ್ಯಾಭ್ಯಾಸ ಮುಗಿಸಿ ಪರಿಸರದ ನಡುವೆ ಬದುಕಬೇಕಬ ಹಂಬಲದಿಂದ ಮೈಸೂರಿನಿಂದ ಮಲೆನಾಡಿನ ಮೂಡಿಗೆರೆಯ ಹಸಿರು ಪರಿಸರದ ಮಧ್ಯೆ ಕಾಫಿ ಕೃಷಿಯೊಂದಿಗೆ ಕೆರೆಯಲ್ಲಿ ಮೀನು ಕೃಷಿಯನ್ನು ಕೈಗೊಂಡು ಪ್ರಾಣಿ- ಪಕ್ಷಿ, ಜೀವ- ಸಂಕುಲಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ತಮ್ಮ ಪರಿಸರದ ಮಧ್ಯೆಯ ತಮ್ಮ ಬದುಕು ಮತ್ತು ಬರಹವನ್ನು ಕಂಡುಕೊಂಡ ಪ್ರಯೋಗಶೀಲ ಬರಹಗಾರರಾಗಿ ತೇಜಸ್ವಿ ಅವರು ಕಂಡು ಬರುತ್ತಾರೆ.
ಚಿಂತಕ, ಲೇಖಕ ಪಿ.ಲಂಕೇಶ್ ಅವರೊಂದಿಗೆ ವೈಚಾರಿಕ ಹೋರಾಟದ ಬದುಕು ಹಾಗೂ ಕಾಫಿ ಕೃಷಿಯ ಬೆಳೆಗಾರರ ನೇತಾರರಾಗಿ ಅವರ ಪರವಾಗಿ ಹೋರಾಡುತ್ತಾ ಸರ್ಕಾರದ ಆಡಳಿತ ವ್ಯವಸ್ಥೆ ಹಾಗೂ ರಾಜಕಾರಣಿಗಳ ಬೆವರಿಳಿಸುವ ಹಲವಷ್ಟು ದೃಷ್ಟಾಂತಗಳನ್ನು ಅವರ ಬದುಕಿನಲ್ಲಿ ನಾವು ಕಾಣಲು ಸಾಧ್ಯ ಎಂದು ಮಿಲನ ಭರತ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ತೇಜಸ್ವಿ ಕಾಡಿನ ಮೂಲೆಯಲ್ಲಿ ಕುಳಿತು ವಿಶ್ವವನ್ನು ಗ್ರಹಿಸಿದ ಮಾನವತಾವಾದಿ.ಕಾಡು ಅವರನ್ನು ರೂಪಿಸಿದೆ.ಕುವೆಂಪು ಅಧ್ಯಯನಶೀಲರಾದರೆ ತೇಜಸ್ವಿ ಪ್ರಯೋಗಶೀಲರು.ಕೀರ್ತಿ ಶನಿಯನ್ನು ತಲೆಗೇರಿಸಿಕೊಳ್ಳದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬರೆದವರು.ರಾಮನ್ ಎಫೆಕ್ಟ್ ರೀತಿ ತೇಜಸ್ವಿ ಎಫೆಕ್ಟ್ ಎನ್ನುವುದು ಸಾಹಿತ್ಯವಲಯದಲ್ಲಿದೆ ಎಂದು ತೇಜಸ್ವಿಯವರ ಸಾಹಿತ್ಯದ ಬದುಕು ಕುರಿತು ವಿಶ್ಲೇಷಿಸಿದರು.
ಲೇಖಕರೂ ಆದ ಚಿಂತಕ ಭಾರದ್ವಾಜ್ ಕೆ.ಆನಂದತೀರ್ಥ ಮಾತನಾಡಿ, ಆಧುನಿಕಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ಮಲೆನಾಡಿನ ಕೃಷಿ ಬದುಕು ಮತ್ತು ಬರಹದ ಮೂಲಕ ವಿಶಿಷ್ಟ ಕೊಡುಗೆ ನೀಡಿದ ತೇಜಸ್ವಿಯವರು ತಮ್ಮ ನಡೆ- ನುಡಿ ಮೂಲಕ ಅವರ ತಂದೆ ಕುವೆಂಪು ಅವರನ್ನು ಮೀರಿಸಿದ ವ್ಯಕ್ತಿತ್ವ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು. *
ಸಂವಾದ: ತೇಜಸ್ವಿಯವರ ಬದುಕು ಮತ್ತು ಅವರ ಸಾಹಿತ್ಯದ ಕುರಿತು ನಡೆದ ಚರ್ಚೆಯಲ್ಲಿ ಬಿ.ಎಸ್.ಲೋಕೇಶ್ ಸಾಗರ್, ಎಚ್.ವಿ.ಶಿವಪ್ಪ, ಹಾ.ತಿ.ಜಯಪ್ರಕಾಶ್, ಎಂ.ಎನ್.ಮೂರ್ತಿ, ಉ.ರಾ.ನಾಗೇಶ್, ಮೆ.ನಾ.ವೆಂಕಟನಾಯಕ್, ಕೆ.ವಿ.ಉಮೇಶ್, ಟಿ.ಜಿ.ಪ್ರೇಮಕುಮಾರ್, ಸುನೀತಾ ಲೋಕೇಶ್, ರುಬೀನಾ, ಕೆ.ಎಸ್.ಮಹೇಶ್ , ಕೆ.ಎನ್.ದೇವರಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್ ಆತಿಥ್ಯ ವಹಿಸಿದ್ದರು. ಚಾವಡಿ ವೇದಿಕೆಯ ಸಂಚಾಲಕ ಕೆ.ವಿ.ಉಮೇಶ್ ಸ್ವಾಗತಿಸಿದರು. ಸಮಾನ ಮನಸ್ಕರು ಜತೆಗೂಡಿ ಚಿಂತನ ಚಾವಡಿ ವೇದಿಕೆ ಮೂಲಕ ಸಾಹಿತ್ಯ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತು ಉಪನ್ಯಾಸ ಹಾಗೂ ಸಂವಾದ ಸಂಘಟಿಸುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟಿ.ಕೆ.ಪಾಂಡುರಂಗ, ಕೆ.ಎನ್.ಸುರೇಶ್, ಡಾ ಸದಾಶಿವಯ್ಯ ಎಸ್ ಪಲ್ಲೇದ್, ಕೆ.ಎಸ್.ಕೃಷ್ಣೇಗೌಡ, ಎಚ್.ಎಸ್.ಲೋಕೇಶ್, ಎಚ್.ಎಸ್.ನಾಗಣ್ಣ, ಎಚ್.ಎಂ.ವೆಂಕಟೇಶ್, ಎಚ್.ಜೆ.ಮಹದೇವ ಸೇರಿದಂತೆ ಸ್ಥಳೀಯರು ಇದ್ದರು.