ಜಾನಪದ ದಸರಾ: ಜಾನಪದ ಕಲಾವೈಭವವನ್ನು ನಾಡಿಗೆ ಪರಿಚಯಿಸುವುದರೊಂದಿಗೆ ಮತ್ತಷ್ಟು ಪ್ರಭಾವಶಾಲಿಯಾಗಿ ಮೂಡಿ ಬರಲಿ: ಶಾಸಕ ಎ‌ಎಸ್ ಪೊನ್ನಣ್ಣ

ಜಾನಪದ ದಸರಾ:  ಜಾನಪದ ಕಲಾವೈಭವವನ್ನು ನಾಡಿಗೆ ಪರಿಚಯಿಸುವುದರೊಂದಿಗೆ ಮತ್ತಷ್ಟು ಪ್ರಭಾವಶಾಲಿಯಾಗಿ ಮೂಡಿ ಬರಲಿ: ಶಾಸಕ ಎ‌ಎಸ್ ಪೊನ್ನಣ್ಣ

ಮಡಿಕೇರಿ: ಗಾಂಧಿ ಮೈದಾನದಲ್ಲಿ, ವಿಜೃಂಭಣೆಯಿಂದ ಸಾಗುತ್ತಿರುವ ದಸರಾ ಉತ್ಸವದ, 5ನೇ ವರ್ಷದ ಜಾನಪದ ದಸರಾ ಕಾರ್ಯಕ್ರಮದಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಮೊದಲಿಗೆ ಜಾನಪದ ದಸರಾದ ಮಳಿಗೆಗಳಿಗೆ ಭೇಟಿ ನೀಡಿ, ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಜಾನಪದ ವೈಭವವನ್ನು ಸಾರುವ ಈ ಕಾರ್ಯಕ್ರಮವನ್ನು ಮನಸಾರೆ ಆಸ್ವಾದಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ನಾಡಿನ ವೈಭವ ಮತ್ತು ಸಂಸ್ಕೃತಿಯನ್ನು ಪ್ರಪಂಚಕ್ಕೆ ಸಾರುವ ನಾಡಹಬ್ಬ ದಸರಾವನ್ನು ಅತ್ಯಂತ ವಿಜ್ರಮಣೆಯಿಂದ ಆಚರಿಸಲು ಎಲ್ಲಾ ರೀತಿಯ ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ.

 ಕೊಡಗಿನ ಗೋಣಿಕೊಪ್ಪ ಹಾಗೂ ಮಡಿಕೇರಿಯಲ್ಲಿ ಆಚರಿಸಲ್ಪಡುತ್ತಿರುವ ದಸರಾ ಉತ್ಸವವು ದಿನೇ ದಿನೇ ಮೆರುಗನ್ನು ಪಡೆಯುತ್ತಿದ್ದು, ನಾಡಿನಾದ್ಯಂತ ಜನರಿಗೆ ಭಕ್ತಿ-ಭಾವದೊಂದಿಗೆ ಮನರಂಜನೆಯನ್ನೂ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಸಂಸ್ಕೃತಿ-ಪರಂಪರೆ ಹಾಗೂ ಆಚರಣೆಗೆ ಅನುಸಾರವಾಗಿ ದಸರಾ ಉತ್ಸವದ ಪ್ರತಿಯೊಂದು ದಿನ, ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಜನಸಾಮಾನ್ಯರಿಗೆ ರಸದೌತಣ ನೀಡುತ್ತಿರುವ ಈ ಹಬ್ಬವು, ಮುಂದೆಯೂ ಜಾನಪದ ಕಲಾವೈಭವವನ್ನು ನಾಡಿಗೆ ಪರಿಚಯಿಸುವುದರೊಂದಿಗೆ ಮತ್ತಷ್ಟು ಪ್ರಭಾವಶಾಲಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ನಾಡಹಬ್ಬ ದಸರವು, ಕರ್ನಾಟಕ ಹಾಗೂ ಕೊಡಗಿನ ಕಲಾವೈಭವವನ್ನು ಇಂದು ಪ್ರಪಂಚಕ್ಕೆ ಪರಿಚಯಿಸುವ ಹಬ್ಬವಾಗಿ ಪರಿಣಮಿಸಿದೆ. ಇದನ್ನು ಪೋಷಿಸಿ, ಬೆಳೆಸಿ ನಾಡಿನ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪರಿಚಯಿಸಲು ನಾವುಗಳು ಮತ್ತಷ್ಟು ಶ್ರಮವನ್ನು ವಹಿಸಿ, ಶ್ರದ್ಧೆಯಿಂದ ಆಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಜಾನಪದ ದಸರಾ ಕಾರ್ಯಕ್ರಮ ಆಯೋಜಕರನ್ನು ಪ್ರಶಂಸಿಸಿದ ಮಾನ್ಯ ಶಾಸಕರು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಾಡಿನಲ್ಲಿ ಸುಖ-ಶಾಂತಿ ಹಾಗೂ ಸೌಹಾರ್ದತೆ ನೆಲೆಸುವಂತಹ ಮಾಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.