Kodagu

ಚಿಕ್ಲಿಹೊಳೆ ನಾಲೆ ದುರಸ್ತಿಗೆ ಸಂಸದ ಯದುವೀರ್ ಒತ್ತಾಯ:ರೈತರ ಹಿತಕ್ಕಾಗಿ ತುರ್ತು ಕಾಮಗಾರಿಗೆ ಕೋರಿ ಕಾವೇರಿ ನಿಗಮಕ್ಕೆ ಪತ್ರ

admincoorgdaily

ಚಿಕ್ಲಿಹೊಳೆ ನಾಲೆ ದುರಸ್ತಿಗೆ ಸಂಸದ ಯದುವೀರ್ ಒತ್ತಾಯ:ರೈತರ ಹಿತಕ್ಕಾಗಿ ತುರ್ತು ಕಾಮಗಾರಿಗೆ ಕೋರಿ ಕಾವೇರಿ ನಿಗಮಕ್ಕೆ ಪತ್ರ

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಗ್ರಾಮದ ಚಿಕ್ಲಿಹೊಳೆ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ತುರ್ತು ದುರಸ್ತಿ ಹಾಗೂ ಹೂಳು ಎತ್ತುವ ಕಾಮಗಾರಿಯನ್ನು ಕೈಗೊಳ್ಳುವಂತೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿದ್ದಾರೆ.

 08.07.2026 ರಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅವರಿಗೆ ಬರೆದ ಪತ್ರದಲ್ಲಿ ಸಂಸದರು, "ರಂಗಸಮುದ್ರ ಗ್ರಾಮದ ಚಿಕ್ಕಿಹೊಳೆ ಜಲಾಶಯದ ನಾಲೆಗಳು ದೀರ್ಘಕಾಲದಿಂದ ಹೂಳು ತುಂಬಿಕೊಂಡು ಶಿಥಿಲಗೊಂಡಿವೆ. ನಾಲೆಗಳಲ್ಲಿ ಹೂಳು ಮತ್ತು ಸಸ್ಯವರ್ಗ ಬೆಳೆದಿರುವುದರಿಂದ ಜಲಾಶಯದಿಂದ ಬಿಡಲಾಗುವ ನೀರು ನಾಲೆಯ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ತಲುಪುತ್ತಿಲ್ಲ" ಎಂದು ತಿಳಿಸಿದ್ದಾರೆ.

 ಇದರಿಂದಾಗಿ ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರ ಹಿತದೃಷ್ಟಿಯಿಂದ ನಾಲೆಗಳ ಪುನಶ್ಚೇತನವನ್ನು ಅತ್ಯಂತ ತುರ್ತಾಗಿ ಮಾಡಬೇಕಾಗಿದೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. "

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚಿಕ್ಕಿಹೊಳೆ ಜಲಾಶಯದ ಉಭಯ ನಾಲೆಗಳ ಹೂಳು ತೆಗೆಯುವ ಮತ್ತು ಶಿಥಿಲಗೊಂಡಿರುವ ಭಾಗಗಳನ್ನು ತುರ್ತಾಗಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ ಈ ಕಚೇರಿಗೆ ಮಾಹಿತಿ ನೀಡಬೇಕು" ಎಂದು ಸಂಸದರು ಕೋರಿದ್ದಾರೆ.