ಎಂಪಿಎಲ್-2: ಗೂಗ್ಲಿಬಾಯ್ಸ್ ಚಾಂಪಿಯನ್; ಅಂಚಿ ಕ್ರಿಕೆಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ

ಎಂಪಿಎಲ್-2: ಗೂಗ್ಲಿಬಾಯ್ಸ್ ಚಾಂಪಿಯನ್;  ಅಂಚಿ ಕ್ರಿಕೆಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ
Photo: winner's& runner's

ಮಡಿಕೇರಿ: ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಹಾಗೂ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಮರಾಟಿ ಪ್ರೀಮಿಯರ್ ಲೀಗ್-2ರ ಕ್ರಿಕೆಟ್ ಪಂದ್ಯಾಟದಲ್ಲಿ ಗೂಗ್ಲಿಬಾಯ್ಸ್ ಕಾನೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಗೂಗ್ಲಿಬಾಯ್ಸ್ ತಂಡ ನಿಗದಿತ 4 ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು 35 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಅಂಚಿ ಕ್ರಿಕೆಟರ್ಸ್ ತಂಡ 4 ವಿಕೆಟ್ ಕಳೆದುಕೊಂಡು 18ರನ್ ಅಷ್ಟೇ ಗಳಿಸಲಷ್ಟೆ ಶಕ್ತವಾಗಿ 17ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ಪರಿಣಾಮ ಗೂಗ್ಲಿಬಾಯ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅಂಚಿ ಕ್ರಿಕೆಟರ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಮರಾಟಿ ರಾಯಲ್ಸ್ ಕೊಡಗು ತಂಡ ನಿಗದಿತ 4 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 46 ಕಲೆ ಹಾಕಿತು. ತಂಡದ ಪರ ಎಸ್.ಆರ್.ಸಂತೋಷ್ ಕುಮಾರ್ 10 ಎಸೆತಗಳಲ್ಲಿ 24 ರನ್ ದಾಖಲಿಸಿದರು. ಗುರಿ ಬೆನ್ನಟ್ಟಿದ ಅಂಚಿ ಕ್ರಿಕೆಟರ್ಸ್ ತಂಡ 3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಆದರ್ಶ್ ಅದ್ಕಲೇಗಾರ್ 11 ಎಸೆತಗಳಲ್ಲಿ 5 ಸಿಕ್ಸರ್ ನೆರವಿನೊಂದಿಗೆ 36 ರನ್ ದಾಖಲಿಸಿ ತಂಡದ ಗೆಲುವಿಗೆ ಪಾತ್ರರಾದರು.

ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಓಂ ಶಕ್ತಿ ಮಹಾಮಾಹಿ ಕರಿಕೆ ತಂಡ ನಿಗದಿತ ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 19ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಗೂಗ್ಲಿ ಬಾಯ್ಸ್ ಕಾನೂರು ತಂಡ 3.3 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಮರಾಟಿ ರಾಯಲ್ಸ್ ಕೊಡಗು ತಂಡ 2 ವಿಕೆಟ್ ಕಳೆದುಕೊಂಡು 47 ರನ್ ಕಲೆಹಾಕಿತು. ತಂಡದ ಪರ ಗಿರೀಶ್ 9 ಎಸೆತಗಳಲ್ಲಿ 29ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಗೂಗ್ಲಿ ಬಾಯ್ಸ್ ತಂಡ 2.4 ಓವರ್‌ನಲ್ಲಿ ಗೆಲುವಿನದಡ ಸೇರಿತು. ತಂಡದ ಪರ ಎಂ.ಆರ್.ಮೋಹನ್ 6 ಎಸೆತಗಳಲ್ಲಿ 27 ರನ್ ಕಲೆ ಹಾಕಿದರು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ 9 ತಂಡಗಳು ಪಾಲ್ಗೊಂಡಿತ್ತು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಎಂ.ವಿ.ಜಯರಾಮ್ ಮತ್ತು ಎಂ.ವಿ.ವರದರಾಜ್ ನಿರ್ವಹಿಸಿದರು.

ವೈಯುಕ್ತಿಕ ಪ್ರಶಸ್ತಿ ವಿವರ: ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ಎಂ.ಆರ್.ಮೋಹನ್, ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ಎಂ.ಕೆ.ಸಂತೋಷ್ ಕುಮಾರ್, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಅಂಚಿ ಕ್ರಿಕೆಟರ್ಸ್ ತಂಡ ಆದರ್ಶ್ ಅದ್ಕಲೇಗಾರ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ವಿಕಾಸ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮರಾಟಿ ರಾಯಲ್ಸ್ ಕೊಡಗು ತಂಡದ ಚೇತನ್, ಬೆಸ್ಟ್ ಟೀಂ ಪ್ರಶಸ್ತಿಯನ್ನು ದಿ ಬಾಯ್ಸ್ ಮಕ್ಕಂದೂರು ತಂಡ ಪಡೆದುಕೊಂಡಿತು. ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಮರಾಟಿ ರಾಯಲ್ಸ್ ಕೊಡಗು ತಂಡದ ಸಂತೋಷ್, ಬೆಸ್ಟ್ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಎಬಿಎಸ್ ಸ್ಟ್ರೈಕರ್ ಗುಡ್ಡೆಹೊಸೂರು ತಂಡದ ರವಿ, ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಯನ್ನು ದಿ ಬಾಯ್ಸ್ ಮಕ್ಕಂದೂರು ತಂಡದ ಯುವರಾಜ್, ಅಪ್ ಕಮಿಂಗ್ ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಶಿವಾಜಿ ಬ್ರದರ್ಸ್ ಚೆಂಬು ತಂಡದ ಬಿಪಿನ್, ಟೂರ್ನಮೆಂಟ್ ಹೈಹೆಸ್ಟ್ ಸಿಕ್ಸರ್ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ಎಂ.ಆರ್.ಮೋಹನ್(27 ಸಿಕ್ಸರ್) ಪಡೆದುಕೊಂಡರು. 

ನಗದು ಬಹುಮಾನ ವಿವರ;

ಮರಾಟಿ ಪ್ರೀಮಿಯರ್ ಲೀಗ್-2ರ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಗೂಗ್ಲಿಬಾಯ್ಸ್ ಕಾನೂರು ತಂಡಕ್ಕೆ 20,000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಅಂಚಿ ಕ್ರಿಕೆಟರ್ಸ್ ತಂಡಕ್ಕೆ 10,000 ನಗದು ಮತ್ತು ಆಕರ್ಷಕ ಟ್ರೋಫಿ, ಹಾಗೂ ತೃತೀಯ ಸ್ಥಾನ ಪಡೆದ ಮರಾಟಿ ರಾಯಲ್ಸ್ ಕೊಡಗು, ಚರ್ತುಥ ಸ್ಥಾನ ಪಡೆದ ಓಂ ಶಕ್ತಿ ಮಹಾಮಾಹಿ ಕರಿಕೆ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. 

ಅಂಬಾಭವಾನಿ ಗುಡ್ಡೆಹುಸೂರು, ಅಂಚಿ ಗರ್ಲ್ಸ್ ಚಾಂಪಿಯನ್ಸ್;

9ನೇ ವರ್ಷದ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಾಜನಾಂಧವರಿಗಾಗಿ ಬಾರದ ಗುಂಡು ಎಸೆತ, ನಿಂಬೆ ಚಮಚ ಓಟ, ಸೂಜಿಗೆ ನೂಲು ಓಟ, ವಿವಿಧ ವಿಭಾಗಗಳಲ್ಲಿ ಪುರುಷ, ಮಹಿಳೆ ಮತ್ತು ಮಕ್ಕಳ ವಿಭಾಗದಲ್ಲಿ ನಡೆಯಿತು. ಜತೆಗೆ ಸಂಗೀತ ಕುರ್ಚಿ, ಕಪ್ಪೆಜಿಗಿತ, ಕಾಳು ಹೆಕ್ಕುವುದು, ಬಕೆಟ್‌ಗೆ ಬಾಲ್ ಹಾಕುವುದು ಪ್ರೇಕ್ಷಕರ ಗಮನ ಸೆಳೆಯಿತು. ಇದೇ ಸಂದರ್ಭ ನಡೆದ ಪುರುಷರ ಹಗ್ಗಜಗ್ಗಾಟದಲ್ಲಿ ಅಂಬಾಭವಾನಿ ಗುಡ್ಡೆಹುಸೂರು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಗೂಗ್ಲಿ ಬಾಯ್ಸ್ ಕಾನೂರು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಅಂಚಿ ಗರ್ಲ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಶ್ರೀ ದೇವಿ ತಾಳತ್ತಮನೆ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರ ಥ್ರೋಬಾಲ್‌ನಲ್ಲಿ ಶ್ರೀ ದೇವಿ ತಾಳತ್ತಮನೆ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅಂಚಿ ಗರ್ಲ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.

ಮರಾಟಿ ಪ್ರೀಮಿಯರ್ ಲೀಗ್-2ರ ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಅಧ್ಯಕ್ಷ ಎಂ.ಆರ್.ಮೋಹನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್, ಮಹಿಳಾ ವೇದಿಜೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ ಸೇರಿದಂತೆ ಇತರರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಚಾ.ವಿ.ಸ.ನಿ.ನಿ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಮಚಂದ್ರ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ದೇವಕಿ.ಜಿ.ಆರ್.ನಾಯ್ಕ್, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, ಪ್ರಮುಖರಾದ ರತ್ನಮಂಜರಿ ನರಸಿಂಹ, ಎಂ.ಎಸ್.ವೆಂಕಪ್ಪ, ಎಂ.ಎ.ನಿರಲ್, ಧನಂಜಯ್, ಕೆ.ಜಿ.ಹೊನ್ನಪ್ಪ, ಕೆ.ಜಿ.ಶಶಿಕಾಂತ್, ಸಂಘದ ಹಿರಿಯ ಸದಸ್ಯರಾದ ಎಂ.ಬಿ.ಪೂವಪ್ಪ, ಎಂ.ಟಿ.ನಾರಾಯಣ್, ಎಂ.ಕೆ.ಮೋಹನ್ ಕಡಗದಾಳು, ಎಂ.ಟಿ.ರಾಘವ್ ನಾಯ್ಕ್ ಇತರರಿದ್ದರು.