ಮಡಿಕೇರಿ ಶಾಸಕರ ನಡೆಯಿಂದ ಕಾಂಗ್ರೆಸ್ ನ ದ್ವಿಮುಖ ಸಿದ್ಧಾಂತ ಬಯಲಾಗಿದೆ : ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಟೀಕೆ

ಮಡಿಕೇರಿ ಶಾಸಕರ ನಡೆಯಿಂದ ಕಾಂಗ್ರೆಸ್ ನ ದ್ವಿಮುಖ ಸಿದ್ಧಾಂತ ಬಯಲಾಗಿದೆ : ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಟೀಕೆ
ಜಾಸಿರ್ ಮೂರ್ನಾಡು

ಮಡಿಕೇರಿ ಜ.28 : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆ ಕುಶಾಲನಗರದಲ್ಲಿ ನಡೆದ ‘ಹಿಂದೂ ಸಂಗಮ’ ಶೋಭಾಯಾತ್ರೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರು ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ನ ದ್ವಿಮುಖ ಸಿದ್ಧಾಂತವನ್ನು ಬಯಲು ಮಾಡಿದ್ದಾರೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಅವರು ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆರ್‌ಎಸ್‌ಎಸ್ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸುವುದಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಘೋಷಿಸುತ್ತಲೇ ಬಂದಿದ್ದಾರೆ.

ಆದರೆ ಮಡಿಕೇರಿ ಕ್ಷೇತ್ರದ ಶಾಸಕರು ಕಾಂಗ್ರೆಸ್ ನಾಯಕರ ಪ್ರತಿಪಾದನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಶಾಸಕರ ಈ ನಡೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಮುಖರು ಒಪ್ಪಿಕೊಳ್ಳುತ್ತಾರೆಯೇ ಅಥವಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಾದಲ್ಲಿ ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಜಾತ್ಯತೀತ ಜನತಾದಳ ಯಾವುದೇ ಜಾತಿ, ಧರ್ಮ, ಜನಾಂಗ ಮತ್ತು ಸಂಘ ಸಂಸ್ಥೆಗಳ ವಿರೋಧಿಯಲ್ಲ.

 ಅಲ್ಪಸಂಖ್ಯಾತರ ಓಲೈಕೆಗಾಗಿ ಆರ್‌ಎಸ್‌ಎಸ್ ನ್ನು ಮುಂದೆಯಿಂದ ಟೀಕಿಸಿ ಹಿಂಬಾಗಿಲಿನಿಂದ ಸ್ವಾಗತಿಸುವ ಕಾಂಗ್ರೆಸ್ ಪಕ್ಷದ ಕ್ಲುಲ್ಲಕ ರಾಜಕಾರಣವನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾಂಗ್ರೆಸ್ ಶಾಸಕರ ಹಾಗೂ ನಾಯಕರ ದ್ವಿಮುಖ ಸಿದ್ಧಾಂತ ಅಲ್ಪಸಂಖ್ಯಾತರನ್ನು ಗೊಂದಲಕ್ಕೀಡು ಮಾಡುತ್ತಿದೆ.

ಆದರೆ ಕಾಂಗ್ರೆಸ್ ಪಕ್ಷದಲ್ಲಿರುವ ಅಲ್ಪಸಂಖ್ಯಾತ ನಾಯಕರಿಗೆ ಈ ಬೆಳವಣಿಗೆಯಿಂದ ಯಾವುದೇ ಮುಜುಗರ ಉಂಟಾಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ನ್ನು ಬಿಜೆಪಿ ಪಕ್ಷದ ‘ಬಿ’ ಟೀಮ್ ಎಂದು ಟೀಕಿಸುವ ಕಾಂಗ್ರೆಸ್ ನಾಯಕರು ಮಡಿಕೇರಿ ಶಾಸಕರ ನಡೆಯ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಕೆ.ಜಿ.ಜಾಶಿರ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಬೆಂಗಳೂರಿನ ಒಂದು ಬಡಾವಣೆಯಲ್ಲಿ ಬುಳ್ಡೋಝರ್ ಬಳಸಿ ಅಲ್ಪಸಂಖ್ಯಾತರ ಮನೆಗಳನ್ನು ನೆಲಸಮ ಮಾಡಲಾಗಿದೆ. ಇದೀಗ ನಾಪೋಕ್ಲುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾದಿ ಮಹಲ್ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗಿದೆ.

ದಾಖಲಾತಿ ನೋಡದೆ ಶಾದಿ ಮಹಲ್ ನಿರ್ಮಾಣ ಕಾರ್ಯ ಹೇಗೆ ಆರಂಭವಾಯಿತು ಎನ್ನುವ ಪ್ರಶ್ನೆ ಮೂಡುತ್ತಿದೆ. ಒಟ್ಟಿನಲ್ಲಿ ದ್ವಿಮುಖ ಸಿದ್ಧಾಂತದ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಇದನ್ನು ಆ ಪಕ್ಷದ ಅಲ್ಪಸಂಖ್ಯಾತ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.