ಮಡಿಕೇರಿ:ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ
ಮಡಿಕೇರಿ ಜು.01:-ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಸಭೆಯು ಇತ್ತೀಚೆಗೆ ನಡೆಯಿತು.
ಗೃಹಲಕ್ಷ್ಮಿ ಯೋಜನೆ: ಶಿಶುಅಭಿವೃದ್ದಿ ಇಲಾಖೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಏಪ್ರಿಲ್ ಮಾಹೆಯವರೆಗೆ ಮಾತ್ರ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹಾಲೇಖಪಾಲಕರ ಆಡಿಟ್ ಗೆ ಅನುಪಾಲನೆ ಒದಗಿಸುವಂತೆ ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್ ಇವರು ಪತ್ರದಲ್ಲಿ ಸೂಚಿಸಿದ್ದು, ಈ ಪತ್ರದ ಕ್ರ.ಸಂ.1 ರಲ್ಲಿ ತಾಲ್ಲೂಕುಗಳಲ್ಲಿ ಹಲವು ಫಲಾನುಭವಿಗಳಿಗೆ ಒಂದೇ ಖಾತೆಗೆ ಯೋಜನೆಯ ಧನಸಹಾಯ ಪಾವತಿಯಾಗಿರುವುದು ಕಂಡುಬಂದಿದೆ. ಆದ್ದರಿಂದ ಈ ವಿಷಯದ ಕುರಿತು ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದರು.
ಮಡಿಕೇರಿ ತಾಲ್ಲೂಕಿನಲ್ಲಿ 01 ಪ್ರಕರಣ ಕಂಡುಬಂದಿದ್ದು ಇದುವರೆಗೆ ಬೇರೆ ಬೇರೆ ರೇಷನ್ ಕಾರ್ಡ್ ಇದ್ದು, ಇಬ್ಬರ ಗೃಹಲಕ್ಷ್ಮಿ ಹಣ ಒಂದೇ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದು ಈ ಮಾಹಿತಿಯನ್ನು ಮೇಲಾಧಿಕಾರಿಯವರಿಗೆ ವರದಿ ಮಾಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಜಿಲ್ಲೆಯಲ್ಲಿ ಹಲವು ಫಲಾನುಭವಿಗಳಿಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಯೋಜನೆಯ ಧನಸಹಾಯ ಪಾವತಿಯಾಗಿರುವುದು ಕಂಡುಬಂದಿದ್ದು, ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಲು ಸೂಚಿಸಿದ್ದು, ಅದರಂತೆ ಮಡಿಕೇರಿ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸಿದಾಗ ಒಂದಕ್ಕಿಂತ ಹೆಚ್ಚು ಖಾತೆ ಇರುವ ಫಲಾನುಭವಿಗಳು 1500 ಜನರ ಮಾಹಿತಿ ಸಿಕ್ಕಿದ್ದು ಈ ಮಾಹಿತಿಯನ್ನು ಸರ್ಕಾರಕ್ಕೆ ವರದಿ ಮಾಡಲಾಗಿರುತ್ತದೆ ಎಂದು ಮಂದ್ರೀರ ಮೋಹನ್ ದಾಸ್ ಅವರು ಸಭೆಗೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಧನಸಹಾಯದ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಸರ್ಕಾರದ ಖಾತೆಗೆ ಜಮೆ ಮಾಡುವ ಕುರಿತು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಬಿಎಲ್‍ಬಿಸಿ ಸಭೆ ಏರ್ಪಡಿಸಲು ಕ್ರಮವಹಿಸುವಂತೆ ಪ್ರಧಾನ ಕಚೇರಿಯಿಂದ ಪತ್ರ ಬಂದಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ತಾ.ಪಂ.ಇಒ ಶೇಖರ್ ಅವರು ಮಾತನಾಡಿ ಮುಂದಿನ ವಾರ ಲೀಡ್ ಬ್ಯಾಂಕ್, ಅಂಚೆ ಕಚೇರಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗಿರುವ ವಿವರ ಪಡೆದು ಈ ಹಣವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲು ಕ್ರಮವಹಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಇಲಾಖಾಧಿಕಾರಿಯವರು ಮಾತನಾಡಿ ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಡೆಯುತ್ತಿರುವ ಫಲಾನುಭವಿಗಳನ್ನೊಳಗೊಂಡ ಉದ್ದೇಶಿತ ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘ ನಿಯಮಿತವನ್ನು ಇಲಾಖಾ ವತಿಯಿಂದ ಪ್ರಾರಂಭಿಸಲು ಈಗಾಗಲೇ ಮಡಿಕೇರಿ ತಾಲ್ಲೂಕಿನಿಂದ 07 ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಯನ್ನು ಸದಸ್ಯರಾಗಿದ್ದ ಅವರ ಸದಸ್ಯತ್ವ ಶುಲ್ಕ ಪಡೆದು, ಪ್ರಧಾನ ಕಚೇರಿಗೆ ಕಳುಹಿಸಲಾಗಿದ್ದು ಉಳಿದ 03 ಅರ್ಹ ಸದಸ್ಯರ ಹೆಸರನ್ನು ಸಮಿತಿ ಸದಸ್ಯರಾದ ಫ್ಯಾನ್ಸಿ ಪಾರ್ವತಿ ಯವರು ನೀಡಿದ್ದು ಪ್ರಧಾನ ಕಚೇರಿಯಿಂದ ಇವರ ಮಾಹಿತಿ ಕೇಳಿದಾಗ ಒದಗಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಶಕ್ತಿಯೋಜನೆ: ಶಕ್ತಿ ಯೋಜನೆಯಲ್ಲಿ ಒಟ್ಟು 1,77,16,290 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 4,41,845 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಯೋಜನೆ ಪಡೆದುಕೊಂಡಿರುತ್ತಾರೆ, ಸರಾಸರಿ 16,348 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿದ್ದು ಶಕ್ತಿ ಯೋಜನೆಯಿಂದ 18.06.2026 ರವರೆಗೆ ಒಟ್ಟು 77,41,43,929 ರೂ. ಸಂಸ್ಥೆಗೆ ಆದಾಯ ಬಂದಿರುತ್ತದೆ ಹಾಗೂ ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಟಿ.ಸಿ ವ್ಯವಸ್ಥೆ ಮಾಡಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ಅನುಮೋದನೆ ದೊರೆತಿರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಅಧ್ಯಕ್ಷರು ಮಾತನಾಡಿ ಬಸ್ ಗಳು ಮಡಿಕೇರಿ ಬಸ್ ನಿಲ್ದಾಣದಿಂದ ಸರಿಯಾದ ಸಮಯಕ್ಕೆ ತೆರಳದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಬಸ್‍ಗಳು ಸರಿಯಾದ ಸಮಯಕ್ಕೆ ತೆರಳುವಂತೆ ಕ್ರಮವಹಿಸಲು ಇಲಾಖಾಧಿಕಾರಿಯವರಿಗೆ ಸೂಚಿಸಿದರು.
ಸಮಿತಿ ಸದಸ್ಯರು ಮಾತನಾಡಿ ಭಾಗಮಂಡಲ–ತಲಕಾವೇರಿ ಮಾರ್ಗದಲ್ಲಿ ಹಾಗೂ ಮಡಿಕೇರಿ-ಕರಿಕೆ ಮಾರ್ಗದಲ್ಲಿಯೂ ಬಸ್ ಕೊರತೆ ಇದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಬಸ್ ವ್ಯವಸ್ಥೆ ಕಲ್ಪಿಸುವಂತೆ ಇಲಾಖಾಧಿಕಾರಿಯವರಿಗೆ ತಿಳಿಸಿದರು.
ಅಧ್ಯಕ್ಷರು ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದ್ದು, ಉಚಿತ ಬಸ್ ಪಾಸ್ ವಿತರಣೆಯಾಗಿರುವ ಬಗ್ಗೆ ವಿವರವನ್ನು ಮುಂದಿನ ಸಭೆಗೆ ನೀಡುವಂತೆ ಸಭೆಯಲ್ಲಿ ಇಲಾಖಾಧಿಕಾರಿಯವರಿಗೆ ಸೂಚಿಸಿದರು.
ಯುವನಿಧಿ: ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 2024, 2025 ಮತ್ತು 2026 ರಲ್ಲಿ ಪದವಿ ಮತ್ತು ಡಿಪೆÇ್ಲೀಮಾ ಉತ್ತೀರ್ಣರಾಗಿ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಉದ್ಯೋಗ ಅಧಿಕಾರಿ ಅವರು ಮಾಹಿತಿ ನೀಡಿದರು.
ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಪ್ರತಿ ತಿಂಗಳ 25 ನೇ ತಾರೀಖಿನೊಳಗೆ ಸ್ವಯಂ ಘೋಷಣೆ ಮಾಡಬೇಕು, ನಿರುದ್ಯೋಗಿಗಳು ಸ್ವಯಂ ದೃಢೀಕರಣ ನೀಡಿದ್ದಲ್ಲಿ ಮಾತ್ರ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖಾ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಮೇ ಮಾಹೆಯವರೆಗೆ ಒಟ್ಟು 620 ಜನ ನೋಂದಣಿಯಾಗಿದ್ದು,ಒಟ್ಟು 1,55,61,000 ರೂ.ಡಿಬಿಟಿ ಯಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಪ್ರಭು ರೈ ಅವರು ಮಾತನಾಡಿ ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 2023-24.2024-25 ಹಾಗೂ 2025-26ನೇ ಸಾಲಿನ ಮಡಿಕೇರಿ ತಾಲ್ಲೂಕುವಾರು ವರದಿಯನ್ನು ಮುಂದಿನ ಸಭೆಗೆ ಒದಗಿಸುವಂತೆ ಹಾಗೂ ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿರುವ ಡಿಪ್ಲೋಮ ಹಾಗೂ ಪದವಿಧರರ ಮಾಹಿತಿಯನ್ನು ಒದಗಿಸುವಂತೆ ಇಲಾಖಾಧಿಕಾರಿಯವರಿಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆ: ಸೆಸ್ಕ್ ಎಂಜಿನಿಯರ್ ಅವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ 52,653 ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ 52,110 ನೋಂದಣಿಗೊಂಡ ಅರ್ಜಿಗಳಾಗಿದ್ದು ಶೇ.98.97 ಶೇಕಡವಾರು ಪ್ರಗತಿಯಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸದಸ್ಯರಾದ ಪ್ರಭು ರೈ ಅವರು ಮಾತನಾಡಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಹಳೆ ಕಂಬಗಳನ್ನು ತೆರವುಗೊಳಿಸಿ ಚರಂಡಿಗಳಲ್ಲಿ ಹಾಕಲಾಗಿದ್ದು, ಕಂಬಗಳನ್ನು ತೆರವುಗೊಳಿಸಲು ಹಿಂದಿನ ಸಭೆಗಳಲ್ಲಿ ತಿಳಿಸಿದ್ದರೂ ಕೂಡ ಇದುವರೆಗೂ ತೆರವುಗೊಳಿಸಿರುವುದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಅನ್ನಭಾಗ್ಯ ಯೋಜನೆ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 38,277 ಪಡಿತರ ಚೀಟಿ ಇದ್ದು 1,21,103 ಒಟ್ಟು ಫಲಾನುಭವಿಗಳಿರುತ್ತಾರೆ, ಅದರಲ್ಲಿ 1,902 ಎಎವೈ ಪಡಿತರ ಚೀಟಿ ಇದ್ದು 7,562 ಎಎವೈ ಫಲಾನುಭವಿಗಳು ಇರುತ್ತಾರೆ, 21,897 ಪಿ.ಹೆಚ್ ಹೆಚ್ ಪಡಿತರ ಚೀಟಿ ಇದ್ದು 71,050 ಫಲಾನುಭವಿಗಳು,14,478 ಎನ್ ಪಿ ಎಚ್ ಎಚ್ ಪಡಿತರ ಚೀಟಿ ಇದ್ದು 42,491 ಫಲಾನುಭವಿಗಳಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ 1,380 ಆಗಿರುತ್ತದೆ ಹಾಗೂ ಪ್ರಸ್ತುತ ಆಹಾರ ಇಲಾಖೆಯಲ್ಲಿ ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಪ್ರಸ್ತುತ ಆಹಾರ ಇಲಾಖೆಯಲ್ಲಿ ಆಸ್ಷತ್ರೆ ಚಿಕಿತ್ಸೆಗಾಗಿ ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರು ಸೇರ್ಪಡೆ ಮಾಡುವ / ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ರಾಜೇಶ್ವರಿ, ಸಿರಾಜುದ್ದಿನ್, ದಯಾನಂದ ಎಂ ಎಸ್, ರಂಗಪ್ಪ, ಮಿಟ್ಟು ಸೋಮಯ್ಯ ಮತ್ತು ಇಲಾಖಾ ಅಧಿಕಾರಿಗಳಾದ ಸೀತಾಲಕ್ಷ್ಮಿ ಶಿಶು ಅಭಿವೃದ್ದಿ ಇಲಾಖೆ, ವೀಣಾ ಆಹಾರ ನಿರೀಕ್ಷಕರು, ಸಿ.ಬಿ.ಮಂಜುನಾಥ್, ಜಿಲ್ಲಾ ಉದ್ಯೋಗಾಧಿಕಾರಿ, ಈರಸಪ್ಪ ಸಹಾಯಕ ಸಂಚಾರ ಅಧೀಕ್ಷಕರು ಕ.ರಾ.ರ.ಸಾನಿಗಮ ಮಡಿಕೇರಿ ಘಟಕ ಸಹಾಯಕ ಅಭಿಯಂತರು ಚೆಸ್ಕಾಂ ಮಡಿಕೇರಿ ಉಪ ವಿಭಾಗ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಪಂ.ರಾಜ್ ಮಡಿಕೇರಿ ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

