ಮಲ್ಮ ಕುಂದ್ ಪ್ರಕರಣ, ಕಾನೂನು ಕ್ರಮಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆಯಿಂದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು
ಮಡಿಕೇರಿ:ಕೊಡಗು ಜಿಲ್ಲೆಯ ಸೂಕ್ಷ್ಮ ಪರಿಸರ ವಲಯದಲ್ಲಿ ಕಾನೂನುಬಾಹಿರವಾಗಿ ನಿಯಂತ್ರಣವಿಲ್ಲದೆ ನಡೆಯುತ್ತಿರುವ ವ್ಯಾಪಕ ಪರಿಸರ ನಾಶದ ವಿರುದ್ಧ, ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ದಕ್ಷಿಣ ವಲಯ ಪೀಠ)ಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ದೂರು ನೀಡಿದೆ.
ಮಿಂಚಂಚೆ ಮೂಲಕ ಅಧಿಕೃತ ದೂರು ದಾಖಲಿಸಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು, ಕೊಡಗಿನಲ್ಲಿ ನಡೆಯುತ್ತಿರುವ ಅವ್ಯಾಹತ ಪರಿಸರ ನಾಶ ತಡೆಯಲು ತಕ್ಷಣ ಮದ್ಯ ಪ್ರವೇಶಿಸಿ, ತಡಯಾಜ್ಞೆ ನೀಡುವುದಲ್ಲದೆ, ಅಕ್ರಮದಾರರು, ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆಯ ಅತ್ಯಂತ ಸೂಕ್ಷ್ಮ ಪರಿಸರ ವಲಯವಾದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸದ್ಯ ನಡೆಯುತ್ತಿರುವ ತೀವ್ರ, ಅವೈಜ್ಞಾನಿಕ ಮತ್ತು ವ್ಯವಸ್ಥಿತ ಪರಿಸರ ನಾಶದ ಬಗ್ಗೆ ಈ ಗೌರವಾನ್ವಿತ ನ್ಯಾಯಾಧಿಕರಣದ ತುರ್ತು ಗಮನ ಸೆಳೆಯಲು ಪ್ರಯತ್ನಿಸಿರುವ ಸಂಘಟನೆಯು, ಇತ್ತೀಚೆಗೆ ಮಲ್ಮ ಕುಂದ್ ಪ್ರಕರಣವು ಒಂದು ಉದಾಹಹರಣೆಯಾಗಿದ್ದು, ಇಂತಹದೇ ಹಲವಾರು ಅನಧಿಕೃತ ವಾಣಿಜ್ಯ ಚಟುವಟಿಕೆಗಳು ಜಿಲ್ಲೆಯಾದ್ಯಂತ ಅವಿಶ್ರಾಂತವಾಗಿ ನಡೆಯುತ್ತಿದ್ದು, ಭೀಕರ ಭೂಕುಸಿತ ಮತ್ತು ಪ್ರಾದೇಶಿಕ ಜಲಕ್ಷಾಮದ ಭೀತಿಯನ್ನು ಒಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತೀವ್ರ ಪರಿಸರ ಉಲ್ಲಂಘನೆಗೆ ಕಾರಣವಾಗಿರುವ ಕರ್ನಾಟಕದ ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ನೆಲಾಜಿ ಗ್ರಾಮದ ಸರ್ವೆ ನಂಬರ್: 286ರ ಜಾಗವನ್ನು ಇತ್ತೀಚೆಗೆ ಅತ್ಯಂತ ಪ್ರಭಾವಿ ವ್ಯಕ್ತಿಯಾದ ಮುಮ್ತಾಜ್ ಅಲಿ ಎಂಬುವವರು ಖರೀದಿಸಿದ್ದು, ಈ ಸ್ಥಳದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಭಾರಿ ಯಂತ್ರೋಪಕರಣಗಳನ್ನು ಬಳಸಿ ಅತ್ಯಂತ ಅವೈಜ್ಞಾನಿಕವಾಗಿ ಬೆಟ್ಟಗಳನ್ನು ಅಗೆಯಲಾಗುತ್ತಿದೆ ಮತ್ತು ನೈಸರ್ಗಿಕ ಅರಣ್ಯ ಸಸ್ಯಸಂಪತ್ತನ್ನು ನಾಶಪಡಿಸಲಾಗುತ್ತಿದೆ.
ಈ ಯೋಜನೆಯು ಯಾವುದೇ ಶಾಸನಬದ್ಧ ಪರಿಸರ ಅನುಮತಿಗಳನ್ನು (Environmental Clearances - EC) ಪಡೆಯದೆ ಮತ್ತು ಚಾಲ್ತಿಯಲ್ಲಿರುವ ಸೂಕ್ಷ್ಮ ಪರಿಸರ ವಲಯದ (Eco-Sensitive Zone - ESZ) ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ನಡೆಯುತ್ತಿದೆ. ಈ ಪ್ರಕರಣವು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ, ಬದಲಿಗೆ ಇದು ಕೊಡಗಿನಾದ್ಯಂತ ಕಂಡುಬರುತ್ತಿರುವ ಅಪಾಯಕಾರಿ ಮತ್ತು ವ್ಯಾಪಕ ಪ್ರವೃತ್ತಿಯಾಗಿದೆ.
ಹಲವಾರು ವಾಣಿಜ್ಯ ಮತ್ತು ರೆಸಾರ್ಟ್ ಯೋಜನೆಗಳು ಯಾವುದೇ ನಿಯಂತ್ರಣ ಸಂಸ್ಥೆಗಳ ಮೇಲ್ವಿಚಾರಣೆಯಿಲ್ಲದೆ ಕಾನೂನುಬಾಹಿರವಾಗಿ ಗುಡ್ಡಗಳನ್ನು ಸಮತಟ್ಟು ಮಾಡುತ್ತಿವೆ ಮತ್ತು ಅವೈಜ್ಞಾನಿಕವಾಗಿ ಮಣ್ಣು ಅಗೆಯುತ್ತಿವೆ. ಇದು ಇಡೀ ಸೂಕ್ಷ್ಮ ಪರಿಸರ ವಲಯವನ್ನು ಭೀಕರ ಪರಿಸರ ವಿಕೋಪ ಮತ್ತು ಭೂಕುಸಿತದ ಆತಂಕದ ಮಡಿಲಿಗೆ ತಳ್ಳಿದೆ. ಕೊಡಗು ಜಿಲ್ಲೆಯು ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿದ್ದು, ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಕುಡಿಯುವ ನೀರು, ಪರಿಸರ ಮತ್ತು ಕೃಷಿಯ ಜೀವನಾಡಿಯಾಗಿದೆ.
ಕೊಡಗಿನ ನೈಸರ್ಗಿಕ ಭೂಪ್ರದೇಶ ಮತ್ತು ನೀರಿನ ತೊರೆಗಳ ಅವೈಜ್ಞಾನಿಕ ನಾಶವು ಕಾವೇರಿ ಜಲಾನಯನ ಪ್ರದೇಶಕ್ಕೆ ಹರಿಯುವ ನೀರನ್ನು ಶಾಶ್ವತವಾಗಿ ನಿಲ್ಲಿಸಿ, ರಾಜ್ಯಗಳ ನಡುವೆ ಅಭೂತಪೂರ್ವ ಜಲಸಂಘರ್ಷಕ್ಕೆ ಕಾರಣವಾಗಬಹುದು.
ಅಲ್ಲದೆ, ಕೊಡಗಿನ ಸ್ಥಳೀಯ ಸಮುದಾಯಗಳು ಮಾನವ ನಿರ್ಮಿತ ಭೂಕುಸಿತಗಳು, ಮಣ್ಣಿನ ಸವೆತ ಮತ್ತು ಹಠಾತ್ ಪ್ರವಾಹದ ಭೀತಿಯನ್ನು ಎದುರಿಸುತ್ತಿದ್ದು, ಇದು ಸ್ಥಳೀಯ ಸಾಮಾಜಿಕ-ಆರ್ಥಿಕ ಜೀವನ, ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಸುರಕ್ಷತೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸಂಘಟನೆಯು, ಸ್ಥಳೀಯ ಗ್ರಾಮಸ್ಥರು ಮತ್ತು ಸಮುದಾಯ ಸಂಘಟನೆಗಳು ಈ ಅಪಾಯಕಾರಿ ಕಾಮಗಾರಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯತ್ತಪಡಿಸಿ ಮನವಿಗಳನ್ನು ಸಲ್ಲಿಸಿದ್ದರೂ ಸಹ, ಸ್ಥಳೀಯ ಆಡಳಿತ ಮತ್ತು ನಿಯಂತ್ರಣ ಮಂಡಳಿಗಳು ಮತ್ತು ಜಿಲ್ಲಾಡಳಿತವು ಕಣ್ಣು ಮುಚ್ಚಿ ಕುಳಿತಿದ್ದು, ಪ್ರಭಾವಿಗಳು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣವೇ 'ಸ್ಟಾಪ್-ವರ್ಕ್' (Stop-Work) ನೋಟಿಸ್ ನೀಡುವಲ್ಲಿ ಅಥವಾ ಕಠಿಣ ಪರಿಸರ ನಿಯಮವನ್ನು ಜಾರಿಗೊಳಿಸುವಲ್ಲಿ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ನೆಲಾಜಿ ಗ್ರಾಮದ ಸರ್ವೆ ನಂಬರ್ 286ರ ನಿರ್ದಿಷ್ಟ ಸ್ಥಳದಲ್ಲಿ ಮತ್ತು ಕೊಡಗು ಜಿಲ್ಲೆಯಾದ್ಯಂತ ನಿಯಮ ಬಾಹಿರವಾಗಿ ನಡೆಯುತ್ತಿರುವ ಎಲ್ಲಾ ರೀತಿಯ ಅವೈಜ್ಞಾನಿಕ ಗುಡ್ಡ ಕಡಿಯುವಿಕೆ, ಮಣ್ಣು ಅಗೆಯುವಿಕೆ ಮತ್ತು ವಾಣಿಜ್ಯ ಕಾಮಗಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ತಡೆಯಲು (IMMEDIATELY STOP) ಮಧ್ಯಂತರ ತಡೆಯಾಜ್ಞೆಯನ್ನು ನೀಡಬೇಕು. ಕೊಡಗು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಾದ ಹೊಣೆಗಾರಿಕೆ ವಹಿಸಿ, ಜಿಲ್ಲೆಯಾದ್ಯಂತ ಪರಿಸರ ಅನುಮತಿ ಇಲ್ಲದೆ ನಡೆಯುತ್ತಿರುವ ಇಂತಹ ಎಲ್ಲಾ ವಾಣಿಜ್ಯ/ಪ್ರವಾಸೋದ್ಯಮ ಯೋಜನೆಗಳ ಕುರಿತು ಸಮಗ್ರ ಮತ್ತು ಕಾಲಮಿತಿಯ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಬೇಕು.
ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ತಕ್ಷಣವೇ ಈ ನಿಯಮ ಉಲ್ಲಂಘನೆಗಳ ಬಗ್ಗೆ ವಸ್ತುಸ್ಥಿತಿ ಪರಿಶೀಲನೆ ನಡೆಸಿ, ಪರಿಸರ ಹಾನಿಯ ಮೌಲ್ಯಮಾಪನ ವರದಿ ಸಲ್ಲಿಸಲು ನಿರ್ದೇಶಿಸಬೇಕು. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಮತ್ತು ದಕ್ಷಿಣ ಭಾರತದ ನೀರಿನ ಭದ್ರತೆಯನ್ನು ಕಾಯ್ದುಕೊಳ್ಳಲು ಈ ಗೌರವಾನ್ವಿತ ನ್ಯಾಯಾಧಿಕರಣವು ಸೂಕ್ತವೆಂದು ಭಾವಿಸುವ ಯಾವುದೇ ಇತರ ಆದೇಶ ಅಥವಾ ನಿರ್ದೇಶನಗಳನ್ನು ನೀಡಬೇಕು ಎಂದು ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿದ್ದಾರೆ.

