ಆಡಿಷನ್ ನೆಪದಲ್ಲಿ 19 ಮಕ್ಕಳನ್ನು ಸ್ಟುಡಿಯೋದಲ್ಲಿ ಬಂಧಿಸಿಟ್ಟ ವ್ಯಕ್ತಿ: ಪೊಲೀಸರಿಂದ ಕ್ಷಿಪ್ರ ದಾಳಿ, ಎಲ್ಲ ಮಕ್ಕಳ ರಕ್ಷಣೆ
ಮುಂಬೈ, ಅ.30: ವೆಬ್‌ಸಿರೀಸ್ ಆಡಿಷನ್ ಹೆಸರಿನಲ್ಲಿ 19 ಮಕ್ಕಳನ್ನು ಸ್ಟುಡಿಯೋದಲ್ಲಿ ಬಂಧಿಸಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಎಲ್ಲಾ ಮಕ್ಕಳನ್ನೂ ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಈ ಘಟನೆ ಪೊವೈ ಪ್ರದೇಶದ ಎಲ್ & ಟಿ ಕಟ್ಟಡದ ಬಳಿಯ ಆರ್‌ಎ ಸ್ಟುಡಿಯೋದಲ್ಲಿ ಗುರುವಾರ ನಡೆದಿದೆ. ಬೆಳಗ್ಗೆ ಪ್ರಾರಂಭವಾದ ಈ ಘಟನೆ ಒಂದು ಗಂಟೆಗೂ ಹೆಚ್ಚು ಕಾಲ ಮುಂದುವರಿದಿದ್ದು, ಪೊಲೀಸರ ತಕ್ಷಣದ ದಾಳಿಯಿಂದ ಮಕ್ಕಳನ್ನು ರಕ್ಷಿಸಲಾಯಿತು.
ಬಂಧಿತನನ್ನು ರೋಹಿತ್ ಆರ್ಯ ಎಂದು ಗುರುತಿಸಲಾಗಿದ್ದು, ಆತ ಮಾನಸಿಕ ಅಸ್ವಸ್ಥನಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತ್ಯನಾರಾಯಣ್ ತಿಳಿಸಿದ್ದಾರೆ. ಚಿತ್ರರಂಗದಲ್ಲಿ ಅವಕಾಶ ಕೊಡಿಸುವ ಭರವಸೆಯೊಂದಿಗೆ ಮಕ್ಕಳನ್ನು ಆಡಿಷನ್ ಹೆಸರಿನಲ್ಲಿ ಕರೆದು, ಸ್ಟುಡಿಯೋದಲ್ಲೇ ಬಂಧಿಸಿಟ್ಟಿದ್ದ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಮುನ್ನ ಆರ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟು, “ಮಕ್ಕಳನ್ನು ನಾನು ಹಣಕ್ಕಾಗಿ ಅಲ್ಲ, ನೈತಿಕ ಕಾರಣಕ್ಕಾಗಿ ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದೇನೆ. ಯಾರಾದರೂ ತೊಂದರೆ ಕೊಟ್ಟರೆ ಕಟ್ಟಡಕ್ಕೆ ಬೆಂಕಿ ಹಚ್ಚುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.
ಸ್ಥಳೀಯರ ಪ್ರಕಾರ, ಸ್ಟುಡಿಯೋದಲ್ಲಿ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಮಕ್ಕಳಿಗೆ ನಟನೆ ತರಬೇತಿ ನೀಡಲಾಗುತ್ತಿತ್ತು. ಆರ್ಯ ಅಲ್ಲಿ ಉದ್ಯೋಗಿಯಾಗಿದ್ದು, ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದನು. ಗುರುವಾರ ಬೆಳಗ್ಗೆ ಆತ ಸುಮಾರು 80 ಮಕ್ಕಳನ್ನು ಹೊರಹಾಕಿ, ಉಳಿದ 20 ಮಂದಿಯನ್ನು ಒಳಗೆ ಬಂಧಿಸಿಟ್ಟುಕೊಂಡಿದ್ದ. ಮಕ್ಕಳು ಕಿಟಕಿಯಿಂದ ಹೊರಗೆ ಸಹಾಯ ಕೋರುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಆತನ ಕೃತ್ಯದ ಹಿಂದಿನ ಉದ್ದೇಶ ಹಾಗೂ ಮಾನಸಿಕ ಸ್ಥಿತಿಯ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.