ಮಂಗಳೂರು: ರೂಂ ಮೇಟ್ ಗಳ ಬಟ್ಟೆ ಬದಲಾಯಿಸುವ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ ಪ್ರಕರಣ; ಯುವತಿಯ ಬಂಧನ ಹನಿ ಟ್ರ್ಯಾಪ್ ಜಾಲದಲ್ಲಿದ್ದ ಬೆಡಗಿ?

ಮಂಗಳೂರು: ರೂಂ ಮೇಟ್ ಗಳ ಬಟ್ಟೆ ಬದಲಾಯಿಸುವ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ ಪ್ರಕರಣ; ಯುವತಿಯ ಬಂಧನ   ಹನಿ ಟ್ರ್ಯಾಪ್ ಜಾಲದಲ್ಲಿದ್ದ ಬೆಡಗಿ?
Photo credit:Asiant news

ಮಂಗಳೂರು, ಅ.19: ಯುವತಿಯರ ಗೌಪ್ಯತೆಗೆ ಧಕ್ಕೆ ತಂದು, ಅವರ ಬಟ್ಟೆ ಬದಲಾಯಿಸುವ ಕ್ಷಣವನ್ನು ರಹಸ್ಯವಾಗಿ ಚಿತ್ರೀಕರಿಸಿ ವೈರಲ್ ಮಾಡಿದ ಪ್ರಕರಣದಲ್ಲಿ ಆರೋಪಿ ನಿರೀಕ್ಷಾ ಎಂಬ ಯುವತಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸಾ ಮೂಲದ ನಿರೀಕ್ಷಾ, ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇಬ್ಬರು ಯುವತಿಯರ ಜೊತೆಗೆ ಕುಡ್ಯೋರಿಗುಡ್ಡೆ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇದೇ ಸಮಯದಲ್ಲಿ, ಅವಳು ರೂಮ್‌ಮೇಟ್‌ಗಳ ಬಟ್ಟೆ ಬದಲಾಯಿಸುವ ದೃಶ್ಯಗಳನ್ನು ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಈ ವಿಡಿಯೋವನ್ನು ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಅಭಿಷೇಕ್ ಎಂಬ ಯುವಕನಿಗೆ ಕಳುಹಿಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಭಿಷೇಕ್, ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.

ಅಭಿಷೇಕ್ ಅಕ್ಟೋಬರ್ 9 ರಂದು ಕಾರ್ಕಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮೊದಲು ಬರೆದಿದ್ದ ಡೆತ್ ನೋಟ್‌ನಲ್ಲಿ ನಿರೀಕ್ಷಾ ಸೇರಿದಂತೆ ಕೆಲವರ ವಿರುದ್ಧ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್‌ ಆರೋಪಗಳನ್ನು ದಾಖಲಿಸಿದ್ದಾನೆ. ಜೊತೆಗೆ, ನಿರೀಕ್ಷಾ ತನ್ನ ರೂಮ್‌ಮೇಟ್‌ಗಳ ಗೌಪ್ಯ ದೃಶ್ಯಗಳನ್ನು ವೈರಲ್ ಮಾಡಿದ್ದಾಳೆ ಎಂಬುದನ್ನೂ ಉಲ್ಲೇಖಿಸಿದ್ದಾನೆ.

ಸಾಯುವ ಮುನ್ನ ಅಭಿಷೇಕ್ ‘Truth Group’ ಎಂಬ ವಾಟ್ಸಪ್ ಗುಂಪು ರಚಿಸಿ, ಯುವತಿಯರ ವಿಡಿಯೋ ಸೇರಿದಂತೆ ಕೆಲವು ಸಂವೇದನಾಶೀಲ ದೃಶ್ಯಗಳನ್ನು ಶೇರ್ ಮಾಡಿದ್ದನು. ಇದರಿಂದ ಆಘಾತಕ್ಕೊಳಗಾದ ಸಂತ್ರಸ್ತ ಯುವತಿಯರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಸ್ವೀಕರಿಸಿದ ಕದ್ರಿ ಪೊಲೀಸರು, ನಿರೀಕ್ಷಾಳನ್ನು ಬಂಧಿಸಿದ್ದಾರೆ. ಅವಳ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳು 77, 78(2), 294(2)(a)ಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಸುಮಾರು ಒಂದು ವರ್ಷ ಹಿಂದೆ ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದೀಗ, ಕಾರ್ಕಳ ಪೊಲೀಸರು ಅಭಿಷೇಕ್‌ನ ಆತ್ಮಹತ್ಯೆ ಕುರಿತು ತನಿಖೆ ಮುಂದುವರೆಸಿದ್ದಾರೆ.