Kodagu

ತಡಿಯಂಡಮೋಳ್ ಬೆಟ್ಟದಲ್ಲಿ ಯುವತಿ ನಾಪತ್ತೆ ಪ್ರಕರಣ;ಯುವತಿ ಸುರಕ್ಷಿತವಾಗಿ ಮರಳಲು ದೇವರಲ್ಲಿ ಹರಕೆ ಹೊತ್ತ ಕುಡಿಯ ಜನಾಂಗ

admincoorgdaily

ಶರಣ್ಯ

ಮಡಿಕೇರಿ;ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳದ ಶರಣ್ಯ 24 ಗಂಟೆಗಳಿಂದ ನಾಪತ್ತೆಯಾಗಿದ್ದಾರೆ. ಪೊಲೀಸ್ ಮತ್ತು ಅರಣ್ಯ ಇಲಾಖೆಯ 60ಕ್ಕೂ ಅಧಿಕ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸ್ಥಳೀಯ ಕುಡಿಯ ಜನಾಂಗದವರು ಯುವತಿ ಸುರಕ್ಷಿತವಾಗಿ ಮರಳಲು ದೇವರಲ್ಲಿ ಹರಕೆ ಹೊತ್ತಿದ್ದಾರೆ. ಕೇರಳದ ಕೋಯಿಕ್ಕೋಡ್ ನಿವಾಸಿ ಶರಣ್ಯ ನಿನ್ನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್​ಗೆ ತೆರಳಿದ್ದರು. ಮನೆಯಲ್ಲಿ ಹೇಳದೆಯೇ ಟ್ರೆಕ್ಕಿಂಗ್ ಬಂದಿದ್ದರು. 9 ಜನರ ಜೊತೆಗೆ ಚಾರಣ ತೆರಳಿದ್ದರು.

ಆದರೆ ನಾಯಿಗಳ‌ ಜೊತೆ ಆಟವಾಡುತ್ತಾ ಹಿಂದೆ ಉಳಿದಿದ್ದಾರೆ. ನಿನ್ನೆ ಸಂಜೆ ದಾರಿ ತಪ್ಪಿರುವುದಾಗಿ ತಾನು ತಂಗಿದ್ದ ಹೋಂ ಸ್ಟೇ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನಿಡಿದ್ದಾರೆ. ಅದಾದ ಬಳಿಕ ಶರಣ್ಯ ಮೊಬೈಲ್‌ ನಾಟ್ ರೀಚೇಬಲ್​ ಆಗಿದೆ. ಟ್ರೆಕ್ಕಿಂಗ್​ಗೆ ತೆರಳಿರುವ ಪ್ರದೇಶದಲ್ಲಿ ವಿಪರೀತ ಕಾಡಾನೆ ಕಾಟ ಇದೆ ಎನ್ನಲಾಗುತ್ತಿದೆ. ಕಳೆದ‌ ರಾತ್ರಿ 3 ಗಂಟೆಯವರೆಗೂ ಶೋಧ ಮಾಡಲಾಗಿದ್ದು, ಇದುವರೆಗೂ ಯುವತಿಯ ಬಗ್ಗೆ ಯಾವುದೇ ಸುಳಿವಿಲ್ಲ.

ಸದ್ಯ ಶರಣ್ಯಳ ಪತ್ತೆಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ನಾಲ್ಕು ತಂಡದಿಂದ‌ ಶೋಧ ಮುಂದುವರೆದಿದೆ. ಆದರೆ ಯಾವುದೇ ಸುಳಿವು ಸಿಗದೆ ನಿರಾಶೆ ಮೂಡಿದೆ. ಹೀಗಿರುವಾಗ ಟ್ರೆಕ್ಕಿಂಗ್​ಗೆ ತೆರಳಿರುವ ಶರಣ್ಯ ಸುರಕ್ಷಿತವಾಗಿ‌ ಮರಳಿ ಬರಲೆಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ‌ ತಮ್ಮಚ್ಚ ದೇವರಿಗೆ ಹರಕೆ ಹೊತ್ತಿದ್ದಾರೆ.

ಇನ್ನು ತಡಿಯಂಡಮೋಳ್‌ ಬೆಟ್ಟದಲ್ಲಿ ದಟ್ಟ ಮಳೆ‌ ಮೋಡ ಕವಿದಿದ್ದು, ಆತಂಕ ಮನೆಮಾಡಿದೆ. ಶರಣ್ಯ ನಾಪತ್ತೆ ಪ್ರಕರಣದ ಬಗ್ಗೆ ಸ್ಥಳೀಯರು ಮಾತನಾಡಿದ್ದು, ದಾರಿ ತಪ್ಪುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ದಾರಿ ತಪ್ಪುವಂತಹ ದುರ್ಗಮ‌ ಹಾದಿ‌ ಏನು ಅಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಶೋಧ ಕಾರ್ಯಕ್ಕೆ ಯವಕಪಾಡಿ ಗ್ರಾಮಸ್ಥರು, ಯುವಕರ ತಂಡ ಸಾಥ್​ ನೀಡಿದ್ದಾರೆ.