ಮಾಲೂರಿನಲ್ಲಿ 'ಮಿಸ್ಟರ್ ಕರ್ನಾಟಕ ಸ್ಟಾರ್ - 2026': ವಿರಾಜಪೇಟೆಯ ವಿ.ಎಮ್. ಪ್ರಜ್ವಲ್‌ಗೆ ಅವಳಿ ಪದಕ
ವಿರಾಜಪೇಟೆ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶ್ರೀರಂಗ ಕನ್ವೆನ್ಷನ್ ಹಾಲ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿದ ಎಂ.ಎನ್. ಫಿಟ್‌ನೆಸ್ ಪ್ರಸ್ತುತಪಡಿಸಿದ ಮಿಸ್ಟರ್ ಕರ್ನಾಟಕ ಸ್ಟಾರ್-2026 ರಾಜ್ಯಮಟ್ಟದ ಮುಕ್ತ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಯುವ ಉದಯೋನ್ಮುಖ ಕ್ರೀಡಾಪಟು ವಿ.ಎಮ್. ಪ್ರಜ್ವಲ್ ಅದ್ಭುತ ಸಾಧನೆ ಮಾಡುವ ಮೂಲಕ ಕಾವೇರಿ ನಾಡಿಗೆ ಹೆಮ್ಮೆ ತಂದಿದ್ದಾರೆ.
ಸ್ಟೆರಾಯ್ಡ್ ಮುಕ್ತವಾಗಿ ನೈಸರ್ಗಿಕ ಶರೀರ ಸೌಷ್ಠವ ಪ್ರದರ್ಶಿಸಿ ವಿ.ಎಮ್. ಪ್ರಜ್ವಲ್ ಅವಳಿ ಪದಕ ಪಡೆದಿದ್ದಾರೆ.
ಸ್ಥಳೀಯ ಸಂತ ಅನ್ನಮ್ಮ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿರುವ ಪ್ರಜ್ವಲ್, ಯಾವುದೇ ಅಪಾಯಕಾರಿ ಸ್ಟೆರಾಯ್ಡ್ ಅಥವಾ ಕೃತಕ ಪದಾರ್ಥಗಳನ್ನು ಬಳಸದೇ, ಸಂಪೂರ್ಣ ನೈಸರ್ಗಿಕ ಆಹಾರ ಕ್ರಮ, ಕಟ್ಟುನಿಟ್ಟಿನ ಶಿಸ್ತು ಹಾಗೂ ನಿರಂತರ ಕಠಿಣ ಶ್ರಮದ ಮೂಲಕವೇ ಶರೀರ ದಾರ್ಢ್ಯತೆ ಗಳಿಸಿ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದರು.
ಅತ್ಯಂತ ಜಿದ್ದಾಜಿದ್ದಿನ 'ಬಿಗಿನರ್ ಬಾಡಿ ಬಿಲ್ಡಿಂಗ್' ಹಾಗೂ 'ಓಪನ್ ಜೂನಿಯರ್ ಬಾಡಿ ಬಿಲ್ಡಿಂಗ್' ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಅದ್ಭುತ ಪ್ರದರ್ಶನದಿಂದ ತೀರ್ಪುಗಾರರ ಮನಗೆದ್ದು, ಎರಡೂ ವಿಭಾಗಗಳಲ್ಲೂ ಪದಕ ಹಾಗೂ ಪ್ರಮಾಣ ಪತ್ರಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಗುರುಗಳ ಸೂಕ್ತ ಮಾರ್ಗದರ್ಶನ:
ಪ್ರಜ್ವಲ್ ಅವರ ಈ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಸಾಧನೆಯ ಹಿಂದೆ ವಿರಾಜಪೇಟೆಯ ತೆಲುಗರ ಬೀದಿಯಲ್ಲಿರುವ 'ರೀಶೇಪ್ ಜಿಮ್' ಮಾಲೀಕರು ಹಾಗೂ ಮುಖ್ಯ ತರಬೇತುದಾರರಾದ ಲಕ್ಷ್ಮೀಶ್, ತರಬೇತುದಾರ ಝಯಿನ್ ಹಾಗೂ ಮಂಗಳೂರಿನ ಖ್ಯಾತ ತರಬೇತುದಾರ ಸತ್ಯರಾಜ್ ಅವರು ನಿರಂತರ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು.
ಸ್ಟೆರಾಯ್ಡ್ ಮುಕ್ತವಾಗಿ ಸಹಜ ಶ್ರಮದ ಮೂಲಕ ರಾಜ್ಯಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿ ಇಂದಿನ ಯುವಜನತೆಗೆ ಪ್ರೇರಣೆಯಾದ ವಿ.ಎಮ್. ಪ್ರಜ್ವಲ್ ಹಾಗೂ ಅವರ ತರಬೇತುದಾರರ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರಜ್ವಲ್ ಅವರು ಗಾಂಧಿನಗರ ನಿವಾಸಿ, ವಿರಾಜಪೇಟೆಯ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಹಾಗೂ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಅವರ ಪುತ್ರ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
