State News

ಮದ್ಯದಲ್ಲಿ ಮಾತ್ರೆ ಬೆರೆಸಿ ಪತ್ನಿ ಹತ್ಯೆ;ಆರೋಪಿಗೆ ಜೀವಾವಧಿ ಶಿಕ್ಷೆ

admincoorgdaily

Photo credit:Etv Bharath (ಫೋಟೋ: ಅಪರಾಧಿ)

ಬೆಂಗಳೂರು, ಜ. 6: ಮದ್ಯದಲ್ಲಿ ನಿದ್ರಾಜನಕ ಮಾತ್ರೆಗಳನ್ನು ಬೆರೆಸಿ ಪತ್ನಿಗೆ ಕುಡಿಸಿ, ಆಕೆ ಸಾವಿಗೀಡಾಗದಿರುವುದನ್ನು ಕಂಡು ದುಪ್ಪಟ್ಟದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಲಾದ ದೃಢ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ಈ ತೀರ್ಪು ನೀಡಿದೆ.

ಆರೋಪಿ ವಿನಯ್ ಕುಮಾರ್ ತನ್ನ ಪತ್ನಿ ಅಶ್ವಿನಿ ಅವರನ್ನು ಹತ್ಯೆ ಮಾಡಿರುವುದು ವಿಚಾರಣೆಯಲ್ಲಿ ಸಾಬೀತಾಗಿದೆ. 2021ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ತನಿಖೆಯ ನಂತರ ದೋಷಾರೋಪಪಟ್ಟಿ ಸಲ್ಲಿಸಲಾಗಿತ್ತು.

ವಿನಯ್ ಕುಮಾರ್ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ನಿವಾಸಿ. ಅಶ್ವಿನಿ ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದವರು. ಸ್ನೇಹಿತೆಯ ಮೂಲಕ ಪರಿಚಯವಾದ ಇಬ್ಬರೂ 2018ರಲ್ಲಿ ವಿವಾಹವಾಗಿದ್ದರು. ಮಹದೇವಪುರ ಠಾಣಾ ವ್ಯಾಪ್ತಿಯ ಎ. ನಾರಾಯಣಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಿವಾಹವಾಗಿ ಮೂರು ವರ್ಷವಾದರೂ ಮಕ್ಕಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ ಯುವತಿಯನ್ನು ಮದುವೆಯಾಗುವ ಉದ್ದೇಶದಿಂದ ಆರೋಪಿಯು ಪತ್ನಿಯನ್ನು ಅಡ್ಡಿಯಾಗೆಂದು ಭಾವಿಸಿ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. 2021ರ ಏಪ್ರಿಲ್ 16ರ ರಾತ್ರಿ ಸಮೀಪದ ಬಾರ್‌ನಲ್ಲಿ ಮದ್ಯ ಖರೀದಿಸಿ, ಫಾರ್ಮಸಿಯಿಂದ ಮಾತ್ರೆಗಳನ್ನು ತಂದಿದ್ದಾನೆ. ಪತ್ನಿಗೆ ತಿಳಿಯದಂತೆ ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿಸಿದ್ದಾನೆ.

ಮಾರನೇ ದಿನ ಬೆಳಿಗ್ಗೆ ಪತ್ನಿ ಉಸಿರಾಡುತ್ತಿರುವುದನ್ನು ಕಂಡು ದುಪ್ಪಟ್ಟದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ನಂತರ ಪತ್ನಿಯ ಕುಟುಂಬಕ್ಕೆ ಕರೆ ಮಾಡಿ, ಆಕೆ ಉಸಿರಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾನೆ.

ಮದ್ಯ ಹಾಗೂ ಮಾತ್ರೆ ಖರೀದಿಸಿದ್ದ ಮಳಿಗೆಗಳ ಸಿಬ್ಬಂದಿಯ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿ, ಮನೆಯಿಂದ ವಶಪಡಿಸಿಕೊಂಡ ಮಾತ್ರೆ ಸ್ಟ್ರಿಪ್‌ಗಳು ಹಾಗೂ ಮರಣೋತ್ತರ ಪರೀಕ್ಷಾ ವರದಿ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ. ಸರ್ಕಾರಿ ವಿಶೇಷ ಅಭಿಯೋಜಕರು ಮಂಡಿಸಿದ ವಾದವನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿ ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ.