ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ

Aug 26, 2026 - 18:16
 0  59
ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ

ಮಡಿಕೇರಿ ಆ.26 : ಸ್ನೇಹದ ಕಡಲು ಬಳಗದ ವತಿಯಿಂದ ಹಿರಿಯ ಸಂಗೀತ ಕಲಾವಿದ, ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರ 81ನೇ ಹುಟ್ಟುಹಬ್ಬವನ್ನು ಆಗಸ್ಟ್ 21ರಂದು ಶುಕ್ರವಾರ ಮೈಸೂರು ಕೊಡವ ಸಮಾಜದ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಹಾಗೂ ಅವರ ಧರ್ಮಪತ್ನಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಸಂಭ್ರಮ ಆಚರಿಸಿ, ಶ್ರೀಕೃಷ್ಣನ ಸ್ಮರಣಿಕೆಯನ್ನು ನೀಡಿ ದಂಪತಿಯನ್ನು ಗೌರವಿಸಲಾಯಿತು.

ಮೈಸೂರು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಿರಿಯ ಕಲಾವಿದರ ಬಗ್ಗೆ ಸ್ನೇಹದ ಕಡಲು ಬಳಗದವರು ತೋರುತ್ತಿರುವ ಅಭಿಮಾನ ಹಾಗೂ ಗೌರವವನ್ನು ಶ್ಲಾಘಿಸಿದ ಅವರು, ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಕೊಡವ ಸಮಾಜದ ಸಭಾಂಗಣದ ಬಾಗಿಲು ಸದಾ ತೆರೆದಿರುತ್ತದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಕಾರ್ಯಗಳಿಗೆ ಸಮಾಜದ ಸಹಕಾರವಿರುತ್ತದೆ ಎಂದು ಭರವಸೆ ನೀಡಿದರು. ಅಲ್ಲದೆ, ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರ 100ನೇ ವರ್ಷದ ಹುಟ್ಟುಹಬ್ಬವನ್ನೂ ಇದೇ ಸಭಾಂಗಣದಲ್ಲಿ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಹಿರಿಯ ಕಲಾವಿದ ಹಾಗೂ ಸಮಾಜ ಸೇವಕ ನೆರವಂಡ ಉಮೇಶ್ ಮಾತನಾಡಿ, ಕಾರ್ಯಕ್ರಮದ ಮುಖ್ಯ ಕಾರಣಕರ್ತರಾದ ಡಾ. ನೆರವಂಡ ಸುರೇಶ್ ಹಾಗೂ ಡಾ. ನೆರವಂಡ ದೇಚಮ್ಮ ಸುರೇಶ್ ದಂಪತಿಯನ್ನು ಅಭಿನಂದಿಸಿದರು. ಸ್ನೇಹದ ಕಡಲು ಬಳಗದ ಪ್ರತಿಯೊಬ್ಬರ ಸಹಕಾರ ಹಾಗೂ ಸುಂದರ ಮನಸ್ಸುಗಳೇ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಗಿವೆ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರು ಗುಲಾಬಿ ಹೂಗಳನ್ನು ನೀಡಿ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ ಶುಭಾಶಯ ಸಲ್ಲಿಸಿದರು. ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾಳೇಟಿರ ಅಜಿತ್, ಚೆಕ್ಕೇರ ಪಂಚಮ್, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಟಿ.ಡಿ. ಮೋಹನ್, ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಹಾಗೂ ಪೋಡಮಾಡ ಭವಾನಿ ನಾಣಯ್ಯ ಸಂಗೀತ ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದಲ್ಲಿ ಡಾ. ನೆರವಂಡ ಸುರೇಶ್, ಡಾ. ನೆರವಂಡ ದೇಚಮ್ಮ ಸುರೇಶ್, ಕಾಳಮಂಡ ಜಗತ್, ಅಜಯ್ ಸೂದ್, ಚೇರುವಾಳಂಡ ಸುಜಲಾ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಪರದಂಡ ಜಯ, ಮೊಳ್ಳೆರ ಅನಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಪ್ರಾರ್ಥನೆ ಸಲ್ಲಿಸಿದರು. ತಾತಂಡ ಪ್ರಭಾ ನಾಣಯ್ಯ ಸ್ವಾಗತಿಸಿದರು. ಮಲ್ಲಮಾಡ ಶ್ಯಾಮಲಾ ವಂದನಾರ್ಪಣೆ ನೆರವೇರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0