ಮೈಸೂರು | ರೈತರ ಮೇಲೆ ದಾಳಿಗೆ ಯತ್ನಿಸಿದ ಹುಲಿ ಸೆರೆ

Nov 28, 2025 - 13:20
 0  1.5k
ಮೈಸೂರು | ರೈತರ ಮೇಲೆ ದಾಳಿಗೆ ಯತ್ನಿಸಿದ ಹುಲಿ ಸೆರೆ
Photo credit: Etv bharath

ಮೈಸೂರು: ಗೌಡನಕಟ್ಟೆ ಗ್ರಾಮದ ಇಬ್ಬರು ರೈತರ ಮೇಲೆ ದಾಳಿ ಮಾಡಲು ಮುಂದಾಗಿದ್ದ ಹುಲಿಯನ್ನು ಅರಣ್ಯ ಇಲಾಖೆ ಗುರುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿ ಗುರುಪುರ ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿ ಈ ಘಟನೆ ನಡೆದಿದೆ.

ರಾತ್ರಿ ಹೊತ್ತಿನಲ್ಲೇ ಅರಣ್ಯ ಇಲಾಖೆಯ ತಂಡ ನಾಲ್ಕು ಆನೆಗಳ ಸಹಕಾರದೊಂದಿಗೆ ಹುಡುಕಾಟ ನಡೆಸಿ, ಜೋಳದ ಹೊಲದ ಮಧ್ಯದಲ್ಲಿ ಅಡಗಿ ಕುಳಿತಿದ್ದ ತಾಯಿ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಿತು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹುಲಿಯನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಮರಿ ಹುಲಿಗಳ ಇರಬಹುದು ಎಂಬ ಶಂಕೆಯಿಂದ ಕಾರ್ಯಾಚರಣೆ ಮುಂದುವರಿದಿದೆ.

ಗುರುವಾರ ಬೆಳಗ್ಗೆ ಗೌಡನಕಟ್ಟೆಯ ರೈತ ಪ್ರಕಾಶ್ ಹಾಗೂ ಸ್ನೇಹಿತ ಸ್ವಾಮಿ ಜಮೀನಿನಲ್ಲಿ ರಸಗೊಬ್ಬರ ಹಾಕುತ್ತಿದ್ದ ವೇಳೆ, ಜೋಳದ ಗದ್ದೆಯಿಂದ ಹೊರಬಂದು ಹುಲಿ ನೇರ ದಾಳಿ ಮಾಡಲು ಮುಂದಾಗಿತ್ತು. ಇಬ್ಬರೂ ಜೋರಾಗಿ ಕಿರುಚಿದ ಪರಿಣಾಮ, ಸಮೀಪದಲ್ಲಿದ್ದ ಇತರ ರೈತರೂ ಸಹ ಕೂಗಿ ಹುಲಿಯನ್ನು ಹೆದರಿಸಿದರು. ಮಾನವ ಶಬ್ದಕ್ಕೆ ಬೆಚ್ಚಿಬಿದ್ದ ಹುಲಿ ಕಾಡಿನೊಳಗೆ ಓಡಿಹೋಗಿದ್ದು, ರೈತರು ಪಾರಾಗುವಲ್ಲಿ ಯಶಸ್ವಿಯಾದರು.

ಘಟನೆಯ ನಂತರ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ಥಳಕ್ಕೆ ಆಗಮಿಸಿದ್ದ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮ್ಮದ್ ಫಯಾಝುದ್ದೀನ್, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಹರ್ಷಕುಮಾರ್ ಹಾಗೂ ಆರ್‌ಎಫ್‌ಒ ನಂದಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

“ಹುಲಿಯನ್ನು ಈಗಲೇ ಸೆರೆ ಹಿಡಿಯಬೇಕು; ಸೆರೆ ಹಿಡಿಯದೆ ಹಿಂತಿರುಗಲು ಬಿಡುವುದಿಲ್ಲ” ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಈ ಹುಲಿ ಈಗಾಗಲೇ ನಾಗಾಪುರದ ಆದಿವಾಸಿ ಯುವಕನನ್ನು ಸೇರಿ ಹಲವು ಜಾನುವಾರುಗಳನ್ನು ಬಲಿ ಪಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಬಳಿಕ ಗ್ರಾಮಸ್ಥರು ರಸ್ತೆಗೆ ಟ್ರಾಕ್ಟರ್‌ ಅಡ್ಡಗಟ್ಟಿ ದಿಗ್ಬಂಧನ ವಿಧಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಅಂತಿಮವಾಗಿ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ, ರಾತ್ರಿ ಇಡೀ ನಡೆಸಿದ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0