ಮೈಸೂರು ನಗರ ಪಾಲಿಕೆ: ಅಕ್ರಮಗಳ ಸಂಖ್ಯೆ ಏರಿಕೆ: ಸಂಸದರ ಆರೋಪ ; ಗ್ರೇಟರ್‌ ಮಾಡುವುದು ಅಲ್ಲ, ಸುಧಾರಣೆ ಗ್ರೇಟ್‌ ಮಾಡಬೇಕು ಎಂದ ಯದುವೀರ್‌ ಒಡೆಯರ್‌

Jan 24, 2026 - 13:50
 0  144
ಮೈಸೂರು ನಗರ ಪಾಲಿಕೆ: ಅಕ್ರಮಗಳ ಸಂಖ್ಯೆ ಏರಿಕೆ: ಸಂಸದರ ಆರೋಪ ;  ಗ್ರೇಟರ್‌ ಮಾಡುವುದು ಅಲ್ಲ, ಸುಧಾರಣೆ ಗ್ರೇಟ್‌ ಮಾಡಬೇಕು ಎಂದ ಯದುವೀರ್‌ ಒಡೆಯರ್‌

ಮೈಸೂರು, ಜ. 24: ಮೈಸೂರು ನಗರಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ. ಉತ್ತರದಾಯಿತ್ವ ಇಲ್ಲದೇ ಅಕ್ರಮಗಳ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಯದುವೀರ್‌, ನಗರ ಪಾಲಿಕೆಯಲ್ಲಿ ಸಾರ್ವಜನಿಕ ನಿಧಿಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಚುನಾಯಿತ ಕಾರ್ಪೊರೇಟರ್‌ಗಳು ಇಲ್ಲದಿರುವುದು, ಸಮರ್ಥ ಮೇಲ್ವಿಚಾರಣೆ ಮಾಡದಿರುವುದು, ಸುಧಾರಣೆ ಕ್ರಮಗಳನ್ನು ಕೈಗೊಳ್ಳದಿರುವುದು, ಉತ್ತರದಾಯಿತ್ವ ಇರದಿರುವುದು ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಎಂದಿದ್ದಾರೆ.

 ಕಾಂಗ್ರೆಸ್ ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ವಿಳಂಬ ಧೋರಣೆ ತೋರುತ್ತಿರುವುದು ಎಲ್ಲದ್ದಕ್ಕೂ ಕಾರಣವಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಸ್ಥಳೀಯ ಪ್ರಜಾಪ್ರಭುತ್ವ ಹಾದಿ ತಪ್ಪಿದಾಗ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.

ಒಟ್ಟಾರೆ ಎಲ್ಲ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆಯಾಗಿದೆ ಎಂದು ಯದುವೀರ್‌ ಆರೋಪಿಸಿದ್ದಾರೆ. ಗ್ರೇಟರ್‌ ಮೈಸೂರು ಮಾಡುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್‌ ಸರ್ಕಾರ, ಅದನ್ನು ಮಾಡದಿದ್ದರೂ ಪರವಾಗಿಲ್ಲ, ನಗರಪಾಲಿಕೆಯಲ್ಲಿ ಗ್ರೇಟರ್‌ ಸುಧಾರಣೆಗಳನ್ನು ಮಾಡಿದರೆ ಸಾಕಾಗಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0