ನಾಪೋಕ್ಲು: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅರ್ಥಪೂರ್ಣವಾಗಿ ಜರುಗಿದ 79ನೇ ಸ್ವಾತಂತ್ರ್ಯ ದಿನಾಚರಣೆ: ಸ್ವಾತಂತ್ರ್ಯ ದಿನವು ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ತೋರಿಸುತ್ತದೆ: ಕರ್ನಲ್ ಪೂವಯ್ಯ

ನಾಪೋಕ್ಲು: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅರ್ಥಪೂರ್ಣವಾಗಿ ಜರುಗಿದ 79ನೇ ಸ್ವಾತಂತ್ರ್ಯ ದಿನಾಚರಣೆ:   ಸ್ವಾತಂತ್ರ್ಯ ದಿನವು ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ತೋರಿಸುತ್ತದೆ: ಕರ್ನಲ್ ಪೂವಯ್ಯ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕ ನಿವೃತ್ತ ಕರ್ನಲ್ ಅಜ್ಜಟ್ಟೀರ ಎಸ್ ಪೊವಯ್ಯ, ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಎನ್.ಎಸ್ ಉದಯ ಶಂಕರ್ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ಅಜ್ಜಟ್ಟೀರ ಪೂವಯ್ಯ ಅವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯು ಭಾರತದ ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ತೋರಿಸುತ್ತದೆ. ವಿವಿಧ ಭಾಷೆಗಳು, ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಹೊಂದಿರುವ ಜನರು ಒಟ್ಟಾಗಿ ಸೇರಿ ಈ ದಿನವನ್ನು ಆಚರಿಸುತ್ತಾರೆ. ಸ್ವಾತಂತ್ರ್ಯದ ದಿನದಂದು ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರುಗಳನ್ನು ಸ್ಮರಿಸುತ್ತೇವೆ ಮತ್ತು ನಮ್ಮ ಮಹಾನ್ ದೇಶದ ಕಲ್ಯಾಣಕ್ಕಾಗಿ ಅವರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತೇವೆ ಎಂದರು. ನಮ್ಮ ದೇಶದ ಭದ್ರತೆಯನ್ನು ಕಾಪಾಡಿಕೊಂಡು ನಮ್ಮ ಪ್ರಾಣವನ್ನು ಅರ್ಪಿಸಿದ ಮತ್ತು ದೈಹಿಕವಾಗಿ ಗಾಯಗೊಂಡ ವೀರ ಸೈನಿಕರನ್ನು ನಾವು ಯಾವತ್ತು ಮರೆಯಬಾರದು ಎಂದರಲ್ಲದೆ 1947 ರಲ್ಲಿ ಸ್ವಾತಂತ್ರ್ಯಮತ್ತು 1962,1965,1971,1990, ಮತ್ತು ಈ ವರ್ಷದ ಇತ್ತೀಚಿನ ಕಾರ್ಯಾಚರಣೆ ಸಿಂದೂರ್ ವಿಜಯ ನಮ್ಮ ಸೈನಿಕರ ಧೈರ್ಯ ಮತ್ತು ಶೌರ್ಯದಿಂದಾಗಿ ನಾವು ದೇಶದಲ್ಲಿ ಶಾಂತಿಯುತ ಜೀವನವನ್ನು ನಡೆಸಿಕೊಳ್ಳುತ್ತಿದ್ದೇವೆ ಎಂದರು. ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯತೆಯ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ನಾವು ನಮ್ಮ ಸ್ವಾತಂತ್ರ್ಯವನನ್ನು ರಕ್ಷಿಸಿಕೊಳ್ಳಬೇಕು.ಸೈನಿಕರು ದೇಶದೊಳಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಹಾಯ ಮಾಡುತ್ತಾರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೊಳಿಸುತ್ತಾರೆ ಹಾಗೆಯೇ ಸೈನಿಕರು ಶಿಸ್ತು, ತ್ಯಾಗ ಮತ್ತು ದೇಶಭಕ್ತಿಯನ್ನು ಪ್ರತಿನಿಧಿಸುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.

 ದೇಶದ ಏಳಿಗೆಗೆ ಬೇಕಾದ ಆಲೋಚನೆ, ಸಾಮರ್ಥ್ಯ,ಶಕ್ತಿಯನ್ನು ನಮ್ಮ ಮುಂಬರುವ ಪೀಳಿಗೆಗೆ ನಾವು ಹೇಳಿಕೊಡಬೇಕು.ದೇಶ ಬೆಳೆಯುತ್ತಿದೆ ಎಂದರೆ ನೀನು ಕೂಡ ಅದರೊಂದಿಗೆ ಬೆಳೆಯುತ್ತಿದ್ದಿಯ ಎಂದ ಅವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನು ಮಾಡಬೇಕೆಂದು ಗುರಿಯನ್ನು ಇಟ್ಟುಕೊಂಡಿರಬೇಕು ನೀವು ಚಂದ್ರನನ್ನು ತಲುಪಲು ಬಯಸಿದರೆ ನೀವು ಸೂರ್ಯ ನಕ್ಷತ್ರಗಳನ್ನು ಗುರಿಯಾಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಉಪಾಧ್ಯಕ್ಷ ಉದಯ್ ಶಂಕರ್ ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು, ಯುವಶಕ್ತಿ ದೇಶದ ಶಕ್ತಿ ಅತಿ ಹೆಚ್ಚು ಯುವ ಶಕ್ತಿ ಇರುವ ದೇಶ ನಮ್ಮದು. ಆದ್ದರಿಂದ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಯಾವುದೇ ದುಶ್ಚಟಗಳಿಗೆ ದಾಸರಾಗದೆ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿ ಬಲಿಷ್ಠ ಭಾರತ ಕಟ್ಟಲು ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಶುಭ ಕೋರಿದರು.

ಶಾಲೆಯ ಸಿವಿಲ್ ಕಾಮಗಾರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ. ಎ.ಹಾರಿಸ್ ಮಾತನಾಡಿ ದೀರ್ಘಕಾಲದ ಬ್ರಿಟಿಷರ ಕಪಿಮುಷ್ಠಿಯಿಂದ ನಮ್ಮ ಪೂರ್ವಜರ ಸುದೀರ್ಘ 90 ವರ್ಷಗಳ ಹೋರಾಟ,ತ್ಯಾಗ ಬಲಿದಾನ ಕಠಿಣ ಶ್ರಮದಿಂದ ಸಿಕ್ಕಿದಂತಹ ಸ್ವತಂತ್ರ್ಯವನ್ನು, ಉಳಿಸಿಕೊಳ್ಳಬೇಕಾದಂತಹ ಜವಾಬ್ದಾರಿ ನಮ್ಮ ಮೇಲಿದೆ. ದೇಶವನ್ನು ಬಹಳ ಮುಖ್ಯವಾಗಿ ಕಾಡುತ್ತಿರುವುದು ಭ್ರಷ್ಟಾಚಾರ ಎಂಬ ಪಿಡುಗು,ದೇಶದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಅನ್ಯಾಯ ಅಸಮಾನತೆ ಭ್ರಷ್ಟಾಚಾರ ಇದರ ವಿರುದ್ಧ ಎದ್ದು ನಿಲ್ಲಬೇಕು,ಮೂಲಭೂತ ಸೌಲಭ್ಯ ನಿರ್ಭಯದ ವಾತಾವರಣ ಪ್ರತಿಯೊಬ್ಬ ಭಾರತೀಯನ ಹಕ್ಕು, ಹಲವು ಮೂಲಭೂತ ಸೌಲಭ್ಯಗಳ ಕೊರತೆ ಇಂದಿಗೂ ದೇಶದಲ್ಲಿ ಕಾಡುತ್ತಿದೆ. ಬಲಾಢ್ಯರ ದಬ್ಬಾಳಿಕೆ ಬಡವರ ಮೇಲೆ ನಿರಂತರವಾಗಿ ನಡೆಯುತ್ತಿದೆ.ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದ ಅವರು ದೇಶದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯ ಸಿಕ್ಕಿ ಭಯಮುಕ್ತ ಹಸಿವು ಮುಕ್ತ ವಾತಾವರಣ ನಿರ್ಮಾಣವಾದರೆ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ. ಆದ್ದರಿಂದ ನಮಗೆ ಹಿರಿಯರು ಒದಗಿಸಿಕೊಟ್ಟ ಸ್ವಾತಂತ್ರ್ಯವನ್ನು ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಕೆ. ಬಿ.ಉಷಾರಾಣಿ ದಿನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ನೋಡುಗರ ಗಮನ ಸೆಳೆಯಿತು. ಪ್ರಭಾರ ಉಪಪ್ರಾಂಶುಪಾಲರಾದ ಎಂ.ಎಸ್. ಶಿವಣ್ಣ, ಮಕ್ಕಳ ಸುರಕ್ಷತಾ ಸಮಿತಿ ಅಧ್ಯಕ್ಷ ಕೇಟೋಳಿರ ರಾಜ ಗಣಪತಿ, ಮೇಲುಸ್ತುವಾರಿ ಸಮಿತಿ ಸದಸ್ಯರಾದ ಆಬಿದ್ ಅಲಿ, ಲಕ್ಷಿತಾ, ಜಗದೀಶ್,ಶಾಲೆಯ ಉಪನ್ಯಾಸಕ ಹಾಗೂ ಶಿಕ್ಷಕ ವೃಂದ, ಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಗಗನ್ ನಿರೂಪಿಸಿ ,ಪ್ರಭಾರ ಪ್ರಾಂಶುಪಾಲರಾದ ಎ.ಎಂ.ವಿಶಾಲ ಸ್ವಾಗತಿಸಿ, ಶಿಕ್ಷಕ ಲೋಕೇಶ್ ವಂದಿಸಿದರು.