ನವಗ್ರಾಮ: ಮಳೆಗೆ ಬರೆ ಕುಸಿತ, ಅಪಾಯದಿಂದ ಮಹಿಳೆ ಪಾರು
ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ನವಗ್ರಾಮದಲ್ಲಿ ಮಳೆಗೆ ಬರೆ ಕುಸಿದಿದ್ದು, ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ ನವಗ್ರಾಮದ ದೇವಮ್ಮ ಎಂಬವರ ಮನೆಯ ಬರೆ ಕುಸಿದು ಬಿದ್ದಿದ್ದು, ಅಪಾಯದಿಂದ ದೇವಮ್ಮರವರು ಪಾರಾಗಿದ್ದಾರೆ. ಮನೆಯ ವಸ್ತುವೊಂದನ್ನು ತೆಗೆಯಲೆಂದು ಹೊರಬಂದಿದ್ದ ಸಮಯ ಬರೆ ಕುಸಿದಿದ್ದು, ದೇವಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದವರ ಗಮನಕ್ಕೆ ತಂದರು.
ನಂತರ ಮಾತನಾಡಿದ ಅವರು, ನವಗ್ರಾಮ ಬೆಟ್ಡ ಗುಡ್ಡ ಪ್ರದೇಶವಾಗಿದ್ದು, ಸೂಕ್ತ ತಡೆಗೋಡೆಯಿಲ್ಲದೇ ಬಹಳಷ್ಟು ಮನೆಗಳು ಅಪಾಯದಲ್ಲಿವೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಜನರ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭ ಸ್ಥಳೀಯರು ಇದ್ದರು.