ಕೊಡಗಿನಲ್ಲಿ ವನ್ಯಜೀವಿ ಸಂಘರ್ಷಕ್ಕೆ ಮಾಜಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಅರಣ್ಯ ಅಧಿಕಾರಿಗಳೇ ಕಾರಣ: ತೆನ್ನಿರ ಮೈನಾ ಆರೋಪ

ಕೊಡಗಿನಲ್ಲಿ ವನ್ಯಜೀವಿ ಸಂಘರ್ಷಕ್ಕೆ ಮಾಜಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಅರಣ್ಯ ಅಧಿಕಾರಿಗಳೇ ಕಾರಣ:  ತೆನ್ನಿರ ಮೈನಾ ಆರೋಪ
ತೆನ್ನೀರಾ ಮೈನಾ

ಮಡಿಕೇರಿ: ಕೊಡಗಿನಲ್ಲಿ ನಿರಂತರ ಕಾಡಾನೆ ಧಾಳಿ,ಹುಲಿ ಧಾಳಿಗಳಿಂದ ಮಾನವ ಜೀವ ಹಾಗೂ ಜಾನುವಾರುಗಳು ಬಲಿಯಾಗುತ್ತಿದ್ದು ಇದಕ್ಕೆಲ್ಲಾ ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಂದಿನ ಅರಣ್ಯಾಧಿಕಾರಿಗಳು ಹಣದ ಆಸೆಗೆ ಬಲಿಯಾಗಿ ಅಕ್ರಮವೆಸಗಿದ್ದೇ ಕಾರಣ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ.

 ಕಳೆದ ಐದಾರು ವರ್ಷಗಳ ಹಿಂದೆ ಕಾಡಾನೆಗಳು ಹೆಚ್ಚಾಗಿ ಬೀಡು ಬಿಟ್ಟಿದ್ದ ಬ್ರಹ್ಮಗಿರಿ ರಕ್ಷಿತಾರಣ್ಯದ ವ್ಯಾಪ್ತಿಗೆ ಒಳಪಡುವ ಮಾಕುಟ್ಟ ಅರಣ್ಯಕ್ಕೆ ಒತ್ತಾಗಿರುವ ಕೇರಳ ರಾಜ್ಯದ ಪ್ರದೇಶದಲ್ಲಿ ಏಳೆಂಟು ಬೃಹತ್ ಪ್ರಮಾಣದ ಗಣಿಗಾರಿಕೆ ಕೊಡಗಿನ ಗಡಿಭಾಗದಲ್ಲಿ ಮಾಕುಟ್ಟ ಅರಣ್ಯದಂಚಿನಲ್ಲಿ ಕಿಲೋಮೀಟರ್ ಗಟ್ಟಲೆ ನಡೆಯಲು ಅವಕಾಶ ನೀಡಲಾಯಿತು. ದೊಡ್ಡ ದೊಡ್ಡ ಕ್ರೆಷರ್ ಗಳು ಹಗಲು ರಾತ್ರಿ ಚಾಲನೆ ನಡೆಸುತ್ತಿವೆ.ಇವುಗಳ ಕಠೋರ ಶಬ್ದದಿಂದ ಆ‌ನೆ,ಹುಲಿಯಂತಹ ಪ್ರಾಣಿಗಳು ಕಾಡನ್ನು ತೊರೆದು ನಾಡಿಗೆ ಬಂದು ವನ್ಯಜೀವಿ ಮತ್ತು ‌ಮಾನವ ಸಂಘರ್ಷಕ್ಕೆ ಕಾರಣವಾಗಿದೆ.

ಗಣಿಗಾರಿಕೆ ಪ್ರದೇಶ ಕೇರಳ ರಾಜ್ಯದಲ್ಲಿದ್ದರೂ ನಮ್ಮ ಜಿಲ್ಲೆಯ ಅರಣ್ಯಾಧಿಕಾರಿಗಳು ಹಣದ ಆಮಿಷಕ್ಕೆ ಬಲಿಯಾಗಿ ನಿರಾಕ್ಷೇಪನಾ ಪತ್ರ ನೀಡುರುತ್ತಾರೆ.ಅಂದಿನ ಶಾಸಕರು ಮತ್ತು ಅಂದಿನ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದರು ಎಂದು ತೆನ್ನಿರ ಮೈನಾ ಆರೋಪಿಸಿದ್ದಾರೆ. ಈ ವಿಚಾರವಾಗಿ ಹಾಲಿ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಸೂಕ್ತ ಕ್ರಮಕ್ಕೆ‌ ಮುಂದಾಗಿದ್ದು ಕೊಡಗು ಜಿಲ್ಲೆ ಅರಣ್ಯ ಇಲಾಖೆ ಅಕ್ರಮವಾಗಿ ನೀಡಿರುವ ನಿರಾಕ್ಷೇಪನಾ ಪತ್ರವನ್ನು ರದ್ದುಪಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವುದರೊಂದಿಗೆ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಲಿದ್ದಾರೆ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.