ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ನೂತನ ಧ್ವಜಸ್ಥಂಭ ಉದ್ಘಾಟನೆ

ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ನೂತನ ಧ್ವಜಸ್ಥಂಭ ಉದ್ಘಾಟನೆ

ಸೋಮವಾರಪೇಟೆ: ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜಸ್ಥಂಭವನ್ನು ದಾನಿಗಳಾದ ಕಾಳೇರಮ್ಮನ ಸಾವಿತ್ರಿ ಮತ್ತು ಮಕ್ಕಳು ಉದ್ಘಾಟಿಸಿದರು.

 ನಂತರ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಾನಿಗಳಾದ ಸಾವಿತ್ರಿ ಮಾತನಾಡಿ,ಈ ಧ್ವಜಸ್ಥಂಭವನ್ನು ತನ್ನ ಪತಿ ದಿವಂಗತ ಪಾಲಾಕ್ಷನವರ ನೆನಪಿನಲ್ಲಿ ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳು ಇದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚುತ್ತಿವೆ. ಆದರೆ, ಐಗೂರಿನ ಶಾಲಾ ಕಾಲೇಜು ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮುಂದುವರೆದಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಗೂ ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಯೋಗೇಶ್ ಮಾತನಾಡಿ,ಯಾವುದೇ ಒಂದು ಗ್ರಾಮದಲ್ಲಿ ಸರಕಾರಿ ಶಾಲೆಗಳು ಅಭಿವೃದ್ದಿ ಹೊಂದಬೇಕಾದರೆ ಅಲ್ಲಿನ ದಾನಿಗಳ ಸಹಕಾರ ಮುಖ್ಯ.ವಿದ್ಯಾರ್ಥಿಗಳು ದೈನಂದಿನ ಪಾಠ ಪ್ರವಚನಗಳನ್ನು ಉತ್ತಮವಾಗಿ ಅಭ್ಯಸಿಸುವ ಮೂಲಕ ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಆತ್ಮವಿಶ್ವಾಸ,ಶ್ರದ್ದೆ,ನಿರಂತರ ಪರಿಶ್ರಮ,ಶಿಸ್ತು ಅಗತ್ಯ.ಈ ಎಲ್ಲಾ ಗುಣಗಳನ್ನು ರೂಢಿಸಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನ ಅಥವಾ ಉದ್ಯೋಗವನ್ನು ಪಡೆದುಕೊಂಡರೆ ತಾವೂ ಸಹ ತಾವು ಓದಿದ ಶಾಲೆಗೆ ಕಿಂಚಿತ್ ಸಹಾಯ ಮಾಡುವ ಮೂಲಕ ದಾನಿಗಳಾಗಬಹುದು ಎಂದರು.

ವೇದಿಕೆಯಲ್ಲಿ ದಾನಿಗಳಾದ ಕಾಳೇರಮ್ಮನ ರಾಯ್,ಕಾಫಿ ಬೆಳೆಗಾರರಾದ ಮಣವಟ್ಟೀರ ಹರೀಶ್, ನಿವೃತ್ತ ಉಪನ್ಯಾಸಕ ಡಿ.ಎಸ್.ಚಂಗಪ್ಪ,ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೊನ್ನಪ್ಪ,ಕಾಲೇಜು ಪ್ರಾಂಶುಪಾಲ ಎಚ್.ಕೆ.ಉಮೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಎ ಯಶ್‌ವಂತ್‌ಕುಮಾರ್, ಕಾಲೇಜು ಅಭಿವೃದ್ದಿ ಸಮಿತಿಯ ಭರತ್,ಶ್ವೇತಾ,ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.