ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ತೀವ್ರ ತಿರುವು ನಾಗಪುರದಲ್ಲಿ ಪತಿ ಸೂರಜ್ ಆತ್ಮಹತ್ಯೆ; ತಾಯಿ ಜಯಂತಿ ಆತ್ಮಹತ್ಯೆ ಯತ್ನ

Dec 27, 2025 - 12:59
 0  1.5k
ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ತೀವ್ರ ತಿರುವು  ನಾಗಪುರದಲ್ಲಿ ಪತಿ ಸೂರಜ್ ಆತ್ಮಹತ್ಯೆ; ತಾಯಿ ಜಯಂತಿ ಆತ್ಮಹತ್ಯೆ ಯತ್ನ
Photo credit: TV09

ಬೆಂಗಳೂರು, ಡಿ. 27: ಬೆಂಗಳೂರಿನ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಗಂಭೀರ ತಿರುವು ಸಿಕ್ಕಿದೆ. ಗಾನವಿಯ ನಿಧನದ ಕೆಲವೇ ದಿನಗಳಲ್ಲಿ ಆಕೆಯ ಪತಿ ಸೂರಜ್ ಮಹಾರಾಷ್ಟ್ರದ ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಸೂರಜ್ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗಾನವಿ, ಪತಿ ಜೊತೆಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಪಾಲಕರ ಮನೆಗೆ ಮರಳಿದ್ದರು. ಈ ಅವಧಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬ್ರೈನ್ ಡೆಡ್ ಸ್ಥಿತಿಗೆ ತಲುಪಿದ ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಗಾನವಿಯ ಸಾವಿನ ಬಳಿಕ ಸೂರಜ್ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಪತ್ನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗಾನವಿಯ ಪೋಷಕರು ಹಾಗೂ ಸಂಬಂಧಿಕರಿಂದ ಎದುರಾದ ಆರೋಪಗಳು ಮತ್ತು ಸಾಮಾಜಿಕ ಒತ್ತಡವನ್ನು ತಡೆಯಲಾಗದೆ ಸೂರಜ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಘಟನೆ ಬಳಿಕ ತಾಯಿ ಜಯಂತಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿವಾಹದ ಬಳಿಕ ದಂಪತಿ ಹನಿಮೂನ್‌ಗೆ ಶ್ರೀಲಂಕಾಗೆ ತೆರಳಿದ್ದು, ಅಲ್ಲಿ ದಾಂಪತ್ಯದಲ್ಲಿ ಕಲಹಗಳು ಉಂಟಾಗಿದ್ದವು ಎನ್ನಲಾಗಿದೆ. ಗಾನವಿಯ ವಿವಾಹಪೂರ್ವ ಸಂಬಂಧದ ವಿಚಾರವೂ ದಾಂಪತ್ಯದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತೆಂದು ತಿಳಿದುಬಂದಿದೆ. ಹನಿಮೂನ್ ಮಧ್ಯದಲ್ಲೇ ಗಾನವಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ನಂತರ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದರು.

ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಸೂರಜ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 0