ಒನ್ಸೈಡ್ ಲವ್ ;ಪಿಯುಸಿ ಹುಡುಗ ಮಾಡಿದ್ದೇನು ಗೊತ್ತೇ!

Jan 11, 2026 - 23:37
 0  2.9k
ಒನ್ಸೈಡ್ ಲವ್ ;ಪಿಯುಸಿ ಹುಡುಗ ಮಾಡಿದ್ದೇನು ಗೊತ್ತೇ!
ಶರ್ಮಿಳಾ

ಬೆಂಗಳೂರು, ಜ.11: ನಗರದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಾಥಮಿಕವಾಗಿ ಬೆಂಕಿಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದರೂ, ತನಿಖೆಯಲ್ಲಿ ಶರ್ಮಿಳಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ.

ಜನವರಿ 3ರಂದು ಶರ್ಮಿಳಾ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆ ಮುಂದುವರಿದಂತೆ, ಎದುರು ಮನೆಯಲ್ಲಿ ವಾಸವಿದ್ದ ಯುವಕನೊಬ್ಬ ಒನ್‌ ಸೈಡ್ ಪ್ರೀತಿಯ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೇರಳ ಮೂಲದವನಾಗಿದ್ದು, ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಜನವರಿ 3ರ ರಾತ್ರಿ ಆರೋಪಿ ಬಾಲ್ಕನಿ ಮೂಲಕ ಶರ್ಮಿಳಾ ಅವರ ಮನೆಗೆ ನುಗ್ಗಿದ್ದಾನೆ. ಮನೆಗೆ ಪ್ರವೇಶಿಸಿದ ಬಳಿಕ ಶರ್ಮಿಳಾ ಅವರೊಂದಿಗೆ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾನೆ. ಇದಕ್ಕೆ ಶರ್ಮಿಳಾ ತೀವ್ರ ವಿರೋಧ ವ್ಯಕ್ತಪಡಿಸಿದಾಗ, ಆರೋಪಿ ಆಕೆಯ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ.

ಹಲ್ಲೆಯಿಂದ ಶರ್ಮಿಳಾ ಪ್ರಜ್ಞೆ ತಪ್ಪಿ ಬಿದ್ದಿದ್ದು, ನಂತರ ಆರೋಪಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬೆಡ್ರೂಮ್ಗೆ ಬೆಂಕಿ ಹಚ್ಚಿದ್ದು, ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ.

ಪ್ರಕರಣ ಸಂಬಂಧ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಶರ್ಮಿಳಾ ಮತ್ತು ಆರೋಪಿ ಪರಸ್ಪರ ಪರಿಚಿತರಾಗಿದ್ದು, ಅಕ್ಕಪಕ್ಕದ ನಿವಾಸಿಗಳಾಗಿದ್ದ ಕಾರಣ ಮಾತುಕತೆ ಇರುತ್ತಿತ್ತೆಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಏಕಪಕ್ಷೀಯ ಪ್ರೀತಿಯೇ ಈ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

What's Your Reaction?

Like Like 2
Dislike Dislike 2
Love Love 2
Funny Funny 0
Angry Angry 0
Sad Sad 7
Wow Wow 0